ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ.
ಶೈಕ್ಷಣಿಕ ಪ್ರಗತಿ, ಭೂಮಿ, ಆರ್ಥಿಕ ವ್ಯವಸ್ಥೆ, ಬಡವರ ಕಲ್ಯಾಣದ ಬಗ್ಗೆ ಅರಸುರವರಿಗಿದ್ದ ದೂರದೃಷ್ಟಿ ಅಲೋಚನೆಗಳಿಂದಲೇ ಹಿಂದುಳಿದ ವರ್ಗದ ಜನರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ತಾಪಂ ಇಒ ಡಾ.ಜಿ.ಪರಮೇಶ್ವರ ಹೇಳಿದರು.
ಪಟ್ಟಣದ ತಾಪಂನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತ, ಬಿಸಿಎಂ ಇಲಾಖೆ ಏರ್ಪಡಿಸಿದ್ದ ದೇವರಾಜ ಅರಸುರವರ ಜನ್ಮದಿನದ ಆಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಜನರ ಶ್ರೇಯೋಭಿಲಾಷೆಗೆ ಅರಸರು ಕೊಡುಗೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಜನರಿಗೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಮರೆಯದ ಮಾಣಿಕ್ಯ ಎನಿಸಿಕೊಂಡಿದ್ದಾರೆ. ಉಳುವವನೆ ಭೂಮಿಯ ಓಡೆಯ ಎಂಬ ಭೂಸುಧಾರಣೆ ನೀತಿ ಜೀತ ಪದ್ದತಿ ನಿರ್ಮೂಲನೆ ತಂದು ಬಡವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.
ತಾಪಂ ಇಒ ಮಾತನಾಡಿ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಕಲ್ಪಿಸಿ, ಹಸಿವು ಮುಕ್ತ ಶಿಕ್ಷಣ ನೀಡಿ ಸರ್ಕಾರಿ ಉದ್ಯೋಗ ಪಡೆಯುವಂತೆ ಮಾಡುವಲ್ಲಿ ಬಿಸಿಎಂ ಇಲಾಖೆಗೆ ಶಕ್ತಿ ನೀಡಿದ ಕೀರ್ತಿ ದೇವರಾಜ್ ಅರಸುರಿಗೆ ಸಲ್ಲುತ್ತದೆ ಎಂದರು.
ಇದಕ್ಕೂ ಮುನ್ನಾ ದಿ.ದೇವರಾಜ್ ಅರಸು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿನಲ್ಲಿ ಹೆಚ್ಚು ಅಂಕ ಪಡೆದ ವಸತಿ ನಿಲಯ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಗದ್ದಿಕೇರಿ ದೊಡ್ಡಬಸಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಮಾತನಾಡಿದರು, ಪಿಯು ಕಾಲೇಜು ಪ್ರಾಚಾರ್ಯ ಡಾ.ಎಂ.ಕೆ.ದುರುಗಪ್ಪ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಚಲವಾದಿ ಮಹಾಸಭಾದ ಅಧ್ಯಕ್ಷ ಕಹಳೆ ಬಸವರಾಜ್, ಮುಖಂಡ ಲೋಕಪ್ಪ, ನರೇಗಾ ಎಡಿ ರಮೇಶ್ ಅಧಿಕಾರಿಗಳಾದ ವೀಣಾ, ಮಹಾಂತೇಶ, ಬಸವರಾಜ್ ಉಪಸ್ಥಿತರಿದ್ದರು.