ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ.
ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗೆ ಭಾಗವಹಿಸಲು ಇಚ್ಛಿಸುವ ಕಲಾವಿದರುಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುವ 6 ರಿಂದ 14 ವರ್ಷದ ಒಳಗಿನ ಪ್ರತಿಭಾವಂತ ಮಕ್ಕಳಿಗಾಗಿ ‘ಚಿಗುರು’ ಕಾರ್ಯಕ್ರಮ, 16 ರಿಂದ 30 ವರ್ಷದೊಳಗಿನ ಪ್ರತಿಭಾವಂತ ಯುವ ಕಲಾವಿದರಿಗಾಗಿ ‘ಯುವ ಸೌರಭ’ ಕಾರ್ಯಕ್ರಮ, ಹಿರಿಯ ಕಲಾವಿದರುಗಳಿಗಾಗಿ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮ ಹಾಗೂ ವಿಶೇಷ ಘಟಕ ಯೋಜನೆಯಡಿ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದ್ದು, ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಚಿಸುವ ಕಲಾವಿದರುಗಳಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜಿಲ್ಲೆಯ ಆಸಕ್ತ ಕಲಾವಿದರುಗಳು ಹೊಸಪೇಟೆ ತಾಲೂಕ ಕಚೇರಿ ಕಟ್ಟಡದ ಕೊಠಡಿ ಸಂಖ್ಯೆ 2 ರಲ್ಲಿರುವ ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಜುಲೈ.7 ರೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.