ಈಶನನ್ನು ಏನೆಂದು ಬೇಡಬೇಕು?
ಆಶೆಗಳು ಕೆಣಕದಿರು, ಪಾಶಗಳ ಬಿಗಿಯದಿರು ಕ್ಷೇಶದ ಪರೀಕ್ಷೆಗಳಿಗೆನ್ನ ಕರೆಯದಿರು |
ಬೇಸರದ ಪಾತಕಸ್ಮೃತಿಯ ಚುಚ್ಚದಿರ್ : ಎನ್ನುತೀಶನನು ಬೇಡತಿರೊ – ಮಂಕುತಿಮ್ಮ ||
ಆಸೆಗಳನ್ನು ಕೆಣಕಬೇಡ, ಭಾಷೆಗಳನ್ನು ಬಿಗಿಯಬೇಡ, ಕಷ್ಟದ ಪರೀಕ್ಷೆಗಳಿಗೆ ನನ್ನನ್ನು ಕರೆಯಬೇಡ. ಬೇಸರದ ಪಾಪದ ನೆನಪಿನಿಂದ ಚುಚ್ಚಬೇಡ. ಎನ್ನುತ್ತಾ ಈಶನನ್ನು ಬೇಡುತ್ತಿರು.
ಭಗವಂತನಲ್ಲಿ ನಾವು ಏನೆಲ್ಲಾ ಬೇಡುತ್ತೇವೆ. ಯಾವುದನ್ನು ಬೇಡಿದರೆ ಚೆನ್ನ ಎಂಬುದಾಗಿ ಮಾನ್ಯ ಡಿವಿಜಿಯವರಿಲ್ಲಿ ಸಲಹೆ ಕೊಡುತ್ತಾರೆ. ನನಗೆ ಆಸೆಗಳನ್ನು ಕೆಣಕಬೇಡ. ಈ ಮಿತಿಮೀರಿದ ಆಸೆಗಳಿಂದಲೇ ಬದುಕು ಕೆಟ್ಟು ಹೋಗುತ್ತದೆ. ನನ್ನನ್ನು ಈ ಪ್ರಾಪಂಚಿಕ ಬಂಧನಗಳಿಂದ ಬಿಗಿಯಬೇಡ. ಕಷ್ಟದ ಪರೀಕ್ಷೆಗಳಿಗೆ ನನ್ನನ್ನು ಕರೆಯಬೇಡ. ಬೇಸರವಾಗುವಂತಹ ಪಾಪಕಾರ್ಯದ ನೆನಪುಗಳಿಂದ ನನ್ನನ್ನು ಚುಚ್ಚಬೇಡ. ಹೀಗೆ ಭಗವಂತನನ್ನು ಬೇಡುತ್ತಿರು. ಇದು ಭಗವಂತನಲ್ಲಿ ಬೇಡುವ ನಿಜವಾದ ಪ್ರಾರ್ಥನೆ. ಭಗವಂತ ನಮಗೆ ಇಷ್ಟನ್ನು ನೀಡಿದರೆ ಎಲ್ಲವನ್ನು ನೀಡಿದ ಹಾಗಾಗುತ್ತದೆ. ಇಲ್ಲಿಯ ಬದುಕು ಸಾರ್ಥಕವಾಗುತ್ತದೆ.