ಉಚ್ಚಂಗಿದುರ್ಗ ಕೂಸಿನ ಮನೆಯ ಮಕ್ಕಳನ್ನು ಎತ್ತಿ ಮುದ್ದಾಡಿದ ಇಒ ಅಪೂರ್ವ.ಎ.ಕುಲಕರ್ಣಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹರಪನಹಳ್ಳಿ.
ಕೂಸಿನ ಮನೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಪೌಷ್ಟಿಕ ಆಹಾರ ಕಡ್ಡಾಯವಾಗಿ ನೀಡಬೇಕು ಎಂದು ಹರಪನಹಳ್ಳಿ ತಾಪಂನ ಇಒ ಅಪೂರ್ವ.ಎ.ಕುಲಕರ್ಣಿ ಸೂಚಿಸಿದರು.
ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಭರತ ಹುಣ್ಣಿಮೆ ಹಾಗೂ ಮುಂಬರುವ ಯುಗಾದಿಗೆ ನಡೆಯುವ ಉಚ್ಚೆಂಗೆಮ್ಮ ಜಾತ್ರೆಯ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಇಒರವರು ಕೂಸಿನ ಮನೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು, ಕೂಸಿನ ಮನೆಗೆ ನರೇಗಾ ಕೂಲಿ ಕಾರ್ಮಿಕರ ಮಕ್ಕಳು ಮಾತ್ರವಲ್ಲದೆ, ಇತರ ಮಕ್ಕಳು ಬಂದರೂ ಕರೆದುಕೊಳ್ಳಬೇಕು. ಯಾವುದೇ ತಾರತಮ್ಯ ಮಾಡಬಾರದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕೂಸಿನ ಮನೆ ನಡೆಯುತ್ತಿದ್ದು, ಇದನ್ನು ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗಬೇಕು. ಇದರಲ್ಲಿ ಆರೈಕೆದಾರರ ಪಾತ್ರ ಬಹಳ ದೊಡ್ಡದು ಇದೆ. ಮಕ್ಕಳನ್ನು ಉತ್ತಮ ರೀತಿಯಲ್ಲಿ ಕಂಡು ನಲಿ-ಕಲಿ ರೀತಿಯಲ್ಲಿ ಚಟುವಟಿಕೆ ಹಮ್ಮಿಕೊಂಡು ನಿರಂತರ ಕೂಸಿನ ಮನೆ ನಡೆಸಬೇಕು ಎಂದು ಪಿಡಿಒಗೆ ಸೂಚಿಸಿದರು.
ಕೂಸಿನ ಮನೆಗೆ ಬರುವ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು. ಮಕ್ಕಳನ್ನು ಆರೈಕೆ ಮಾಡುವಾಗ ತಮ್ಮ ಮಕ್ಕಳಂತೆ ನೋಡಿಕೊಂಡು ಸರ್ಕಾರ ನೀಡುವ ಆಹಾರ ನೀಡಿ ಎಲ್ಲ ಮಕ್ಕಳು ಪೌಷ್ಟಿಕವಾಗಿ ಬೆಳೆಯಬೇಕು ಎಂದರು. ಇನ್ನು ಕೂಸಿನ ಮನೆಯ ಮಕ್ಕಳನ್ನು ಕಂಡು ಸ್ವತಃ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಅವರು ಎತ್ತಿ ಮುದ್ದಾಡಿದ್ದು ಗಮನ ಸೆಳೆಯಿತು.
ಈ ವೇಳೆ ಪಿಡಿಒ ಪರಮೇಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಎಂ.ಕೆಂಚಪ್ಪ, ತಾಪಂ ಸಿಬ್ಬಂದಿ ದಾದ ಖಲೀಲ್, ಗ್ರಾಪಂ ರಾಜಣ್ಣ, ಎಂ, ದಂಡೆಪ್ಪ ಹಾಜರಿದ್ದರು.