ನಿನ್ನ ಬದುಕು ಹೇಗಿರಬೇಕು ?
ಒಲ್ಲೆನೆನದಿರು ಬಾಳನ್ ; ಒಲವದೇನೆನ್ನದಿರು ಉಲ್ಲಾಸಕೆಡೆಮಾಡು ನಿನ್ನಿನಾದನಿತು |
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು – ಮಂಕುತಿಮ್ಮ ||
ಬಾಳನ್ನು ಬೇಡವೆನ್ನಬೇಡ. ಪ್ರೀತಿಯೆಂಬುದೇನು ಎಂದು ಕೇಳಬೇಡ. ಸಂತೋಷಕ್ಕೆ ಅವಕಾಶವನ್ನು ಕೈಲಾದಷ್ಟು ಮಾಡಿಕೊಡು. ಅನ್ಯಾಯಗಳನ್ನು ದೂರ ಮಾಡಲು ಕೆಚ್ಚೆದೆಯಿಂದ ನಿಲ್ಲು ಎಲ್ಲದಕ್ಕೂ ಸಿದ್ದನಾಗಿರು.
ಮಾನ್ಯ ಡಿವಿಜಿಯವರು ಬದುಕನ್ನು ಹೇಗೆ ನಿರ್ವಹಿಸಬೇಕೆಂದು ಇಲ್ಲಿ ಸೂಚಿಸಿದ್ದಾರೆ. ನಾವು ಈ ಜಗತ್ತಿಗೆ ಬಂದ ಮೇಲೆ ಬದುಕು ಅನಿವಾರ್ಯ ಅದನ್ನು ನಿರ್ವಹಿಸಲೇಬೇಕು. ಅದನ್ನು ಎಂದೂ ಬೇಡ ಅನ್ನಬಾರದು. ಪ್ರೀತಿಯ ಬಗ್ಗೆ ತಾತ್ಸಾರ ಬೇಡ. ಪ್ರೀತಿಯೆಂಬುದೇನು ಎಂದು ಕೇಳಬಾರದು. ನಮ್ಮಿಂದ ಶಕ್ಯವಿದ್ದಷ್ಟು ಆನಂದಕ್ಕೆ ಅವಕಾಶ ಮಾಡಿಕೊಂಡು ಬದುಕಬೇಕು. ಅನ್ಯಾಯಗಳನ್ನು ದೂರೀಕರಿಸಲು ಧೈರ್ಯದಿಂದ ಹೋರಾಡಬೇಕು. ಏನು ಬಂದರೂ ಅದನ್ನು ಎದೆಗಟ್ಟಿ ಮಾಡಿಕೊಂಡು ಎದುರಿಸಲು ಸನ್ನದ್ಧವಾಗಿರಬೇಕು. ಭಗವಂತ ನಮಗೆಲ್ಲ ಕೊಟ್ಟ ಈ ಭೂಮಿಯ ಬದುಕಿಗೆ ನಾವು ಸಾಧ್ಯವಾದಷ್ಟು ಗೌರವ ಕೊಟ್ಟು ಬಾಳಬೇಕು. ಹೂರಣ ತುಂಬುವಲ್ಲಿ ಪ್ರಯತ್ನಿಸಬೇಕು. ಇದರಿಂದಲೇ ನಮ್ಮೆಲ್ಲರ ಬದುಕು ಪೂರ್ಣವಾದೀತು.