ಕಂಪ್ಯೂಟರ್ ಜ್ಞಾನ ಇಲ್ಲದವ ಪ್ರಸ್ತುತ ಅನಕ್ಷರಸ್ಥನಿದ್ದಂತೆ : SLR ಮೆಟಾಲಿಕ್ಸ್ ಉದ್ಯೋಗಿ ದತ್ತಾತ್ರೇಯ ಅಭಿಮತ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಕಂಪ್ಯೂಟರ್ ಜ್ಞಾನ ಇಲ್ಲದವನು ಪ್ರಸ್ತುತ ಯುಗದಲ್ಲಿ ಅನಕ್ಷರಸ್ಥನಿದ್ದಂತೆ ಎಂದು ಎಸ್.ಎಲ್.ಮೆಟಾಲಿಕ್ಸ್ ಕಂಪನಿಯ ಐಟಿ ವಿಭಾಗದ ಉದ್ಯೋಗಿ ದತ್ತಾತ್ರೇಯ ಅಭಿಪ್ರಾಯಪಟ್ಟರು.
ತಾಲೂಕಿನ ವರದಾಪುರ ಗ್ರಾಮದಲ್ಲಿ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಪ್ರಸ್ತುತದಲ್ಲಿ ಕಂಪ್ಯೂಟರ್ ಶಿಕ್ಷಣ ಕಲಿಕೆ ಅನಿವಾರ್ಯವಾಗಿದೆ. ಗ್ರಾಮೀಣ ಭಾಗದ ಯುವಕ, ಯುವತಿಯರು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗದಂತೆ ಮತ್ತು ಕಂಪ್ಯೂಟರ್ ಜ್ಞಾನ ಇಲ್ಲದೇ ನಿರುದ್ಯೋಗಿಗಳಾಗದಿರಲು ಹಳ್ಳಿ ಮಟ್ಟದಲ್ಲಿ ಯುವಜನತೆಗೆ ಕಂಪ್ಯೂಟರ್ ಶಿಕ್ಷಣ ನೀಡಲು ಎಸ್.ಎಲ್.ಆರ್ ಮೆಟಾಲಿಕ್ಸ್ ಮುಂದಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೇ ಅನಕ್ಷರಸ್ಥರಂತೆ ಕಾಣಲಾಗುತ್ತದೆ. ಹಾಗಾಗಿ ಉನ್ನತ ವಿದ್ಯಾಭ್ಯಾಸದ ಜತೆಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಕಂಪ್ಯೂಟರ್ ಕಲಿತವರಿಗೆ ಹೆಚ್ಚು ಉದ್ಯೋಗ ಅವಕಾಶವಿದೆ. ಪಟ್ಟಣವಾಸಿಗಳು ಹಣ ಕೊಟ್ಟು ಕಂಪ್ಯೂಟರ್ ಕಲಿಯಲು ಅವಕಾಶಗಳಿವೆ. ಆದರೆ ಗ್ರಾಮೀಣಪ್ರದೇಶದ ಬಡ ಯುವಕರು ಕಲಿಯುವ ಆಸಕ್ತಿ ಇದ್ದರೂ, ಪಟ್ಟಣಕ್ಕೆ ತೆರಳಿ ಹಣ ಕೊಟ್ಟು ಕಲಿಯದೇ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿದ್ದಲ್ಲಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಗ್ರಾಮದ ಮುಖಂಡ ಹುಸೇನ್ ಪೀರ್ ಮಾತನಾಡಿ, ಚಿಕ್ಕ ಹಳ್ಳಿಗೆ ಬಂದು ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಷ್ಟೋ ಯುವಕ, ಯುವತಿಯರು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮುಗಿಸಿದರೂ ಕಂಪ್ಯೂಟರ್ ಶಿಕ್ಷಣ ಪಡೆದಿಲ್ಲ ಹಾಗಾಗಿ ಯೋಜನೆ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು.
ಈ ವೇಳೆ. ಎಸ್.ಎಲ್.ಆರ್ ಮೆಟಾಲಿಕ್ಸ್ ಸಿಬ್ಬಂದಿಗಳಾದ ಮಾರುತಿ, ಮುರುಳಿ ಗ್ರಾಮದ ಯುವಕ ವೆಂಕಟೇಶ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ.ಯು. ಸಂಸ್ಥೆಯ ಸಿಬ್ಬಂದಿ ಯು.ಭಾಗ್ಯ, ವಿದ್ಯಾರ್ಥಿಗಳಾದ ಚಂದ್ರಿಕಾ, ಮುಂಜುನಾಥ ಇತರರಿದ್ದರು.