‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನ ಆರಂಭ : ಹರಪನಹಳ್ಳಿ ತಾಪಂ ಇಒ ವೈ.ಎಚ್.ಚಂದ್ರಶೇಖರ್.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹರಪನಹಳ್ಳಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಅ.2 ರಿಂದ ಒಂದು ತಿಂಗಳ ಕಾಲ ಜಿಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆ ಹಾಗೂ ಉಪ ಕಾರ್ಯದರ್ಶಿಗಳ ಮಾರ್ಗದರ್ಶನದಂತೆ ಎಲ್ಲಾ ಗ್ರಾಪಂ ಮಟ್ಟದಲ್ಲಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನ ಆರಂಭಿಸಲಾಗಿದೆ ಎಂದು ಹರಪನಹಳ್ಳಿ ತಾಪಂನ ಇಒ ವೈ.ಎಚ್.ಚಂದ್ರಶೇಖರ್ ಪತ್ರಿಕೆಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಬೇಕಿದೆ. ಈ ಕುರಿತು ಮನೆಮನೆಗೆ ಭೇಟಿ ನೀಡಿದ ವೇಳೆ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿಯಾಗಿದ್ದು, ಗಂಡು ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ ರೂ. 349/, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಿಯಾಯಿತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರುಗಳಿಗೆ ನಿರ್ವಹಿಸುವ ಕೆಲಸಕ್ಕೆ/ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ. 10 ಕೆಲಸ ಪ್ರಮಾಣದಲ್ಲಿ ರಿಯಾಯಿತಿ, ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಠ ಶೇ.60 ಪ್ರತಿಶತಕ್ಕೆ ಹೆಚ್ಚಿಸುವ ಕುರಿತು ಅಭಿಯಾನದ ವೇಳೆ ತಿಳಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು, ಪಿಡಿಒ, ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿಗಳಾದ ಕಾಯಕ ಬಂಧುಗಳು, ತಾಂಡಾ ರೋಜಗಾರ್ ಮಿತ್ರರು, ಗ್ರಾಮ ಕಾಯಕ ಮಿತ್ರರು ಬಿಎಫ್‌ಟಿಗಳು, ತಾಂತ್ರಿಕ ಸಹಾಯಕ ಅಭಿಯಂತರರು ಹಾಗೂ ಅನುಷ್ಠಾನ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಬೇಕು ಮತ್ತು ತಮ್ಮ ವಾರ್ಡ್ಗಳ ಪ್ರತಿ ಮನೆಗೂ ಭೇಟಿ ನೀಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು “ಬೇಡಿಕೆ ಪೆಟ್ಟಿಗೆ”ಯನ್ನು ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಸ್ಥಾಪಿಸಿ ಪ್ರತಿದಿನ ಸ್ವೀಕೃತವಾದ ಬೇಡಿಕೆಗಳನ್ನು ಅ.31 ರವರೆಗೆ ಅರ್ಜಿಗಳನ್ನು ಸಂಗ್ರಹಿಸಬೇಕು ಹಾಗೂ ಮೊಬೈಲ್ ಅಪ್ಲಿಕೇಶನ್ ಕೂಡ ಸಿದ್ಧವಾಗಿದ್ದು, ಅದರ ಮೂಲಕವೂ ಸಾರ್ವಜನಿಕರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ವಾರ್ಡ್ ಸಭೆ : ಜನರಿಂದ ಹಾಗೂ ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ತಯಾರಿಸಿ ಅನುಮೋದಿಸಿ, ಗ್ರಾಮ ಸಭೆಗೆ ಸಲ್ಲಿಸುವುದು, ವಾರ್ಡ್ ಸಭೆಯನ್ನು ನ.11 ರೊಳಗೆ ಪೂರ್ಣಗೊಳಿಸಬೇಕು.
ಗ್ರಾಮಸಭೆ : ಗ್ರಾಮ ಸಭೆಗಳನ್ನು ಪಂಚಾಯತ್ ರಾಜ್ ಕಾಯ್ದೆಯ ನಿಯಮಾನುಸಾರ ನ.30 ರೊಳಗೆ ಆಯೋಜಿಸಿ ವಾರ್ಡ್ ಸಭೆ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ವೀಕೃತವಾದ ಕಾಮಗಾರಿಗಳ ಕ್ರೋಢೀಕೃತ ಪಟ್ಟಿ ತಯಾರಿಸಿ ಅದರಲ್ಲಿ ಆದ್ಯತವಾರು ಪಟ್ಟಿ ಸಿದ್ದಪಡಿಸಿ ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳುವುದು.
ರೈತರಿಂದ ರೈತರಿಗಾಗಿ ಕ್ರಿಯಾಯೋಜನೆ : ನರೇಗಾ ಯೋಜನೆಯ ಮಾರ್ಗಸೂಚಿಯಂತೆ ರೈತರಿಂದ ಸ್ವೀಕೃತವಾದ ಬೇಡಿಕೆ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಆದ್ಯತವಾರು ವಿಂಗಡಿಸಿ (ಅದರಲ್ಲಿ ಶೇ. 65 ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಶೇ. 60 ರಷ್ಟು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ) ಕಾಮಗಾರಿಗಳ ಗುಚ್ಛ ತಯಾರಿಸುವುದು ಸದರಿ ಕಾಮಗಾರಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು.
ದುರ್ಬಲ ವರ್ಗ: ದುರ್ಬಲವರ್ಗದ ಕುಟುಂಬಗಳನ್ನು ಗಮನದಲ್ಲಿರಿಸಿಕೊಂಡು ಬೇಡಿಕೆ ಮುನ್ನಂದಾಜನ್ನು ತಯಾರಿಸುವುದು, ವೈಯಕ್ತಿಕ ಭೂ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ, ಮತ್ತು ಇತರ ವೈಯಕ್ತಿಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸುವುದು.
ಮಹಿಳಾ/ಮಕ್ಕಳಿಗೆ ಆದ್ಯತೆ : ಶೋಷಿತ ಮಹಿಳೆಯರು, ಅಬಲೆಯರು, ಪರಿತ್ಯಕ್ತ ಗ್ರಾಮೀಣ ಮಹಿಳೆಯರು ಗ್ರಾಮಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದು. ಅವರ ಬೇಡಿಕೆ ಸ್ವೀಕರಿಸುವುದಲ್ಲದೆ ಅವರ ಸಮಸ್ಯೆಗಳು ಇದ್ದಲ್ಲಿ, ಚರ್ಚಿಸಿ ಪರಿಹರಿಸಲು ನೆರವಾಗುವುದು. ಹಾಗೆಯೇ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅವಶ್ಯಕ ಶಾಲಾಭಿವೃದ್ಧಿ ಚಟುವಟಿಕೆಗಳನ್ನು ಕಾಮಗಾರಿ ಗುಚ್ಛದಲ್ಲಿ ಸೇರ್ಪಡೆ ಮಾಡುವುದು.
ಕೂಲಿ ಸಾಮಗ್ರಿ ಅನುಪಾತ : ವಾರ್ಷಿಕ ಕ್ರಿಯಾಯೋಜನೆಯಲ್ಲಿ ತೆಗೆದುಕೊಂಡ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೂಲಿ ಸಾಮಗ್ರಿ ಅನುಪಾತವನ್ನು ಲೆಕ್ಕ ಹಾಕುವಾಗ ಕಡ್ಡಾಯವಾಗಿ ಮಾದರಿ ಅಂದಾಜು ಪತ್ರಿಕೆಗಳಲ್ಲಿ ನೀಡಲಾಗಿರುವ ಕೂಲಿ ಸಾಮಗ್ರಿ ಅನುಪಾತವನ್ನು ಪರಿಗಣಿಸತಕ್ಕದ್ದು. ಒಟ್ಟು ಅಂದಾಜು ವೆಚ್ಚದಲ್ಲಿ ಸಾಮಗ್ರಿ ಅನುಪಾತವು ಶೇ.40ರಷ್ಟನ್ನು ಮೀರತಕ್ಕದಲ್ಲ. “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ – ಕರ್ನಾಟಕ’ 2007ರ ಪ್ರಕರಣ 12ರನ್ವಯ ರಸ್ತೆ ಕಾಮಗಾರಿಗಳಿಗೆ ಮೀಸಲಿಟ್ಟ ಅಂದಾಜು ಮೊತ್ತವು ವಾರ್ಷಿಕ ಕ್ರಿಯಾ ಯೋಜನೆಯ ಒಟ್ಟು ಅಂದಾಜು ವೆಚ್ಚದ ಶೇ.10 ಮೀರತಕ್ಕದಲ್ಲ. ಗ್ರಾಪಂಗಳು ಗ್ರಾಮ ಸಭೆಯಲ್ಲಿ ಅನುಮೋದಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಡಿ.5 ರೊಳಗಾಗಿ ತಾಪಂಗೆ ಸಲ್ಲಿಸುವುದು ಎಲ್ಲಾ ಗ್ರಾಮಪಂಚಾಯಿತಿಗಳ ಕ್ರೋಢಿಕೃತ ತಾಲೂಕು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದಿಸಿ ಡಿ.20 ರೊಳಗಾಗಿ ಜಿಪಂ ಸಿಇಒರವರ ಅನುಮೋದನೆಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.