ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಸರ್ಕಾರದಿಂದ ಬರುವ ಯೋಜನೆಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ‘ಜಿಲ್ಲಾ ಸಾಥಿ ಸಮಿತಿ’ಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎನ್.ರಾಜೇಶ್ ಹೊಸಮನೆ ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳಲ್ಲಿ ಆಶ್ರಯ ಪಡೆಯುತ್ತಿರುವ 18 ವರ್ಷದೊಳಗಿನ ನಿರ್ಗತಿಕ ಮಕ್ಕಳು ಹಾಗೂ ಬೀದಿ, ಕೊಳಗೇರಿ, ರೈಲ್ವೆ ನಿಲ್ದಾಣ, ಆರೈಕೆ ಕೇಂದ್ರ ವಾಸಿಸುತ್ತಿರುವ ಮಕ್ಕಳು. ಅನಾಥರು, ಏಕಪೋಷಕ ಮಕ್ಕಳು, ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮತ್ತು ಬಾಲ ಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳು. ಮಾದಕ ವ್ಯಸನಿ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಜೀತ ಪದ್ಧತಿಯಿಂದ ರಕ್ಷಿಸಲ್ಪಟ್ಟಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ದಾಖಲಾತಿಯನ್ನು ಮಾಡಿಸಿ ಅವರಿಗೆ ಕಾನೂನಿನ ನೆರವು, ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹಾಗೂ ನಿರ್ಗತಿಕ ಮಕ್ಕಳ ಗುರುತಿಸಿ ಅವರ ಪೋಷಕರು, ಕುಟುಂಬಕ್ಕೆ ಸೇರಿಸುವುದು ಜಿಲ್ಲಾ ಸಾಥಿ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯಲ್ಲಿ ಎರಡೂ ಜಿಲ್ಲೆಗಳ ತಾಲೂಕುಗಳ ತಹಶೀಲ್ದಾರರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಡಿಡಿಪಿಐ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಅನಾಥಾಶ್ರಮ ಮತ್ತು ಮಕ್ಕಳ ಕಾಳಜಿ ಕೇಂದ್ರಗಳ ಅಧಿಕಾರಿಗಳು, ಪ್ಯಾನಲ್ ವಕೀಲರು ಮತ್ತು ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸದಸ್ಯರುಗಳಾಗಿರುತ್ತಾರೆ. ಸಮಿತಿಯ ಸದಸ್ಯರು ನಿರ್ಗತಿಕ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ದಾಖಲೆಗಳನ್ನು ಮಾಡಿಸಿ, ಅವರಿಗೆ ಆರೋಗ್ಯ, ಶಿಕ್ಷಣ, ಪುರ್ನವಸತಿಗಾಗಿ ಕ್ರಮ ಕೈಗೊಳ್ಳಲಾಗಿರುತ್ತದೆ. ಸಮಿತಿಯೊಂದಿಗೆ ಕಾಲೇಜು ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರೇತರ ಸಂಸ್ಥೆಗಳು ಸಹ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ರೀತಿಯ ನಿರ್ಗತಿಕ ಮಕ್ಕಳನ್ನು ನೋಡಿದಲ್ಲಿ ಕೂಡಲೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೂ.08392 278077, 9141193929, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಉಚಿತ ಕಾನೂನು ಸೇವೆ ಸಂಖ್ಯೆ 15100 ಕರೆ ಮಾಡಿ ತಿಳಿಸಬೇಕೆಂದು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ
RELATED ARTICLES