ಊಟ-ಗಳಿಕೆಗಳು ಹೇಗಿರಬೇಕು?
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು ಹೊಟ್ಟೆ ಜೀರ್ಣಿಸುವಷ್ಟೆ ; ಮಿಕ್ಕುದೆಲ್ಲ ಕಸ | ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ? ಮುಷ್ಟಿ ಪಿಷ್ಟವು ತಾನೆ ? – ಮಂಕುತಿಮ್ಮ ||
ನೀನು ಎಷ್ಟು ಊಟ ಮಾಡಿದರೇನು? ಹೊಟ್ಟೆ ಜೀರ್ಣ ಮಾಡಿಕೊಳ್ಳುವಷ್ಟೇ ಪುಷ್ಟಿ ಶರೀರಕ್ಕೆ ದೊರಕುತ್ತದೆ. ಉಳಿದುದೆಲ್ಲ ಕಸವಾಗಿ ಬಿಡುತ್ತದೆ. ನೀನು ಎಷ್ಟು ಗಳಿಸಿದರೂ ನಿನಗೆ ದಕ್ಕುವುದು ಮುಷ್ಟಿ ಹಿಟ್ಟು ತಾನೇ?
ನಾವು ಮಾಡುವ ಊಟ ಹಾಗೂ ಗಳಿಕೆ ಒಂದು ಮಿತಿಯಲ್ಲಿರಬೇಕು. ಎಷ್ಟೇ ಊಟ ಮಾಡಿದರೂ ನಮ್ಮ ಹೊಟ್ಟೆ ಜೀರ್ಣ ಮಾಡಿಕೊಳ್ಳುವಷ್ಟು ಮಾತ್ರ ಅದು ಸ್ವೀಕರಿಸುತ್ತದೆ. ಅಷ್ಟು ಮಾತ್ರ ನಮ್ಮ ಶರೀರಕ್ಕೆ ಪುಷ್ಟಿ ದೊರಕುತ್ತದೆ. ಉಳಿದುದನ್ನೆಲ್ಲ ಕಸವನ್ನಾಗಿ ಮಾಡಿಬಿಡುತ್ತದೆ. ನಮ್ಮ ಗಳಿಕೆಯೂ ಹಾಗೆಯೇ. ನಾವು ಪಡೆದುದನ್ನು ಉಣ್ಣುತ್ತೇವೆಯೇ ಹೊರತು ದುಡಿದುದನ್ನೆಲ್ಲಾ ಅನುಭವಿಸುವುದಿಲ್ಲ. ಎಷ್ಟೇ ದುಡಿದರೂ ಅದರ ಸ್ವಲ್ಪ ಭಾಗ ನಮಗೆ ದಕ್ಕುತ್ತದೆ. ಎಷ್ಟೇ ಗಳಿಕೆ ಮಾಡಿದರೂ ಒಂದು ಮುಷ್ಟಿಯಷ್ಟು ಹಿಟ್ಟು ಮಾತ್ರ ನಮಗೆ ಸಿಗುತ್ತದೆ. ಅದ್ದರಿಂದ ಊಟ ಹಾಗೂ ಗಳಿಕೆಗಳು ಒಂದು ಮಿತಿಯಲ್ಲಿ ಸಾಗುತ್ತಿರಬೇಕು.