ನಮ್ಮ ಜೀವನ ಪರಿಪಕ್ವವಾಗುವುದು ಯಾವುದರಿಂದ?
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ | ವೇಳೆಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?
ತಾಳುಮೆಯೆ ಪರಿಪಾಕ – ಮಂಕುತಿಮ್ಮ ||
ಬೆಳಗ್ಗೆ ಬಿತ್ತಿದ ಕಾಳು ಸಂಜೆಗೆ ಫಸಲು ಕೊಡುತ್ತದೆಯೆ? ನಮ್ಮ ವ್ಯವಸಾಯಗಳಲ್ಲಿ ಕಾಲಕ್ಕೂ ಪಾಲಿದೆ. ಸಮಯದ ಮಿತಿಯನ್ನು ಮರೆತು, ಆತುರದಿಂದ ಅಡುಗೆ ಸಿದ್ಧವಾಗುತ್ತದೆಯೆ? ತಾಳ್ಮೆಯೇ ಪರಿಪಕ್ವತೆಯನ್ನು ನೀಡುತ್ತದೆ.
ತಾಳ್ಮೆ ನಮ್ಮ ಬದುಕಿಗೆ ಪರಿಪಕ್ವತೆಯನ್ನು ತಂದುಕೊಡುತ್ತದೆ. ನಾವು ಆತುರಪಡಿಸಿದರೆ ಕೆಲಸಗಳು ಆಗುವುದಿಲ್ಲ. ಅದಕ್ಕೆ ಸಮಯದ ನಿರ್ಬಂಧವೂ ಇರುತ್ತದೆ. ಬೆಳಿಗ್ಗೆ ಬಿತ್ತಿದ ಕಾಳು ಸಂಜೆಯ ಹೊತ್ತಿಗೆ ಪೈರನ್ನು ನೀಡಲಿ ಎಂದು ಬಯಸಿದರೆ ಹೇಗೆ? ನಮ್ಮ ಕಾರ್ಯಗಳಲ್ಲಿ ಕಾಲನಿಗೂ ಒಂದು ಪಾಲಿದೆ. ನಮಗೆ ಹಸಿವೆಯಾಗಿದೆ ಎಂದು ತಕ್ಷಣ ಆಹಾರ ಬೇಕೆಂದು ಬಯಸಿದರೆ ಆಗದು. ಅಡುಗೆ ತಯಾರಾಗಲು ಒಂದಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ತಾಳ್ಮೆಯನ್ನು ಬದುಕಿನಲ್ಲಿ ಗಳಿಸಿಕೊಂಡರೆ ಬದುಕಿಗೊಂದು ಪಕ್ವತೆ ದೊರಕುತ್ತದೆ.