ಸಮಾನವಾಗಿ ವರ್ತಿಸುವವರು ಯಾರು?
ಕಿವುಡತನ ತಪ್ಪೀತೆ ರನ್ನಕುಂಡಲದಿಂದ?
ತೊವಲು ಜಬ್ಬಲುವಬಿಳದೆ ಮೃಷ್ಟಾನ್ನದಿಂದ?
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ ಜವರಾಯ ಸಮವರ್ತಿ – ಮಂಕುತಿಮ್ಮ ||
ರತ್ನದ ಕುಂಡಲವನ್ನು ಧರಿಸಿರುವುದರಿಂದ ಕಿವುಡುತನ ದೂರವಾದೀತೆ? ಮೃಷ್ಟಾನ್ನ ಭೋಜನದಿಂದ ಚರ್ಮ ಜೋತು ಬೀಳದೆ ಇರುತ್ತದೆಯೇ? ಭೂಮಿಯ ಪರಿಣಾಮದಲ್ಲಿ ಶ್ರೀಮಂತಿಕೆ ಬಡತನಗಳೆರಡೂ ಒಂದೇ. ಯಮ ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ.
ಕಿವಿ ಕೇಳಿಸದಿದ್ದವನು ತನ್ನಲ್ಲಿ ಹಣವಿದೆ ಎಂದುಕೊಂಡು ರತ್ನದ ಕುಂಡಲವನ್ನು ಕಿವಿಯಲ್ಲಿ ಧರಿಸಿದ ಮಾತ್ರಕ್ಕೆ ಕಿವುಡು ದೂರವಾಗುತ್ತದೇನು? ಅನುದಿನವೂ ಮೃಷ್ಟಾನ್ನ ಭೋಜನ ಮಾಡುವ ಧನಿಕನ ಮುಖದಲ್ಲಿ ಮುಪ್ಪುಬಂದೊಡನೆ ಚರ್ಮ ಜೋತು ಬೀಳುವುದಿಲ್ಲವೇನು? ಭೂಮಿಯ ಪರಿಣಾಮದಲ್ಲಿ ಸಿರಿತನ ಬಡತನ ಎರಡೂ ಸಮಾನವಾದವುಗಳು. ಹಣವಿದ್ದ ಮಾತ್ರಕ್ಕೆ ಈ ಪರಿಣಾಮಗಳನ್ನು ಬದಲಿಸಲು ಸಾಧ್ಯವಿಲ್ಲ. ಯಮರಾಜ ಇಬ್ಬರನ್ನೂ ಸಮಾನವಾಗಿ ನೋಡಿಕೊಳ್ಳುತ್ತಾನೆ. ಸಿರಿವಂತನನ್ನೂ ಕೊಂಡೊಯ್ಯತ್ತಾನೆ, ಬಡವನನ್ನು ಕೊಂಡೊಯ್ಯುತ್ತಾನೆ. ಆದ್ದರಿಂದಲೇ ಅವನು ಸಮವರ್ತಿ.