ಗುಲಾಬಿಯ ಅಂದ ಎಷ್ಟು ಹೊತ್ತಿನದು.
ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ |
ಪೊಂಗುವಾನಂದವದನನುಭವಿಸಿದವನ್ ಅಜನ ಹಂಗಿಪನೆ ಕೃಪಣತೆಗೆ? – ಮಂಕುತಿಮ್ಮ ||
ಆರು ತಿಂಗಳ ದುಡಿತದ ನಂತರ ಕೆಂಪು ಗುಲಾಬಿಯು ಬೆಳೆಯುತ್ತದೆ. ಅದರ ಸಂಪತ್ತು ಅರ್ಧ ಘಳಿಗೆಯ ಹೂವಿನ ರೂಪದಲ್ಲಿ ಶೋಭಿಸುತ್ತದೆ. ಹೊರ ಹೊಮ್ಮುವ ಅದರ ಆನಂದವನ್ನು ಅನುಭವಿಸಿದವನು ಬ್ರಹ್ಮನನ್ನು ಜಿಪುಣನೆಂದು ಹಂಗಿಸುತ್ತಾನೇನು?
ಒಂದು ಗುಲಾಬಿಯ ಹೂವನ್ನು ಪಡೆಯಬೇಕಾದರೆ ಆರು ತಿಂಗಳ ಕಾಲ ಅದರ ಅರೈಕೆ ಮಾಡಬೇಕಾಗುತ್ತದೆ. ಆರು ತಿಂಗಳ ದುಡಿಮೆಯ ನಂತರ ಕೆಂಪು ಗುಲಾಬಿ ಹೂ ಅರಳಿ ನಿಲ್ಲುತ್ತದೆ. ಅದರೆ ಅದರ ಸೊಬಗು ರಂಜಿಸುವುದು ಸ್ವಲ್ಪ ಕಾಲ ಮಾತ್ರ. ಅರೆಗಳಿಗೆಯ ಹೂವಿನಲ್ಲಿಯೇ ಗುಲಾಬಿಯ ಸಂಪತ್ತು ಅಡಗಿದೆ. ಆದರೆ ಅಷ್ಟು ಆರೈಕೆ ಮಾಡಿದ ನಂತರ ಚೆಂಗುಲಾಬಿ ಅರಳಿ ನಿಂತಾಗ ಅಪರಿಮಿತ ಆನಂದ ಬೆಳೆಸಿದವನಿಗಾಗುತ್ತದೆ. ಆರು ತಿಂಗಳ ಶ್ರಮಕ್ಕೆ ಅರೆ ಗಳಿಗೆಯ ಸಂಪತ್ತನ್ನು ಅವನು ಪಡೆಯುತ್ತಾನೆ. ಯಾರು ಅದರ ಆನಂದವನ್ನು ಅನುಭವಿಸುತ್ತಾನೋ ಅವನು ‘ಬ್ರಹ್ಮ ಬಹಳ ಜಿಪುಣ. ಅರಗಳಿಗೆಯ ಸಂಪತ್ತಿಗಾಗಿ ನನ್ನನ್ನು ಆರು ತಿಂಗಳ ಕಾಲ ದುಡಿಸಿದ’ ಎಂದು ಹಂಗಿಸುತ್ತಾನೆಯೇ? ಸಿಗುವ ಆನಂದವನ್ನು ಮನಸ್ಸಿನಲ್ಲಿ ಬೇರೆ ಏನನ್ನೂ ಇಟ್ಟುಕೊಳ್ಳದೆ ಅನಿಭವಿಸಿಬಿಡುತ್ತಾನೆ. ಲೋಕದ ಬದುಕೇ ಹಾಗೆ. ಕ್ಷಣ ಸುಖಕ್ಕಾಗಿ ವರ್ಷಗಟ್ಟಲೆ ಶ್ರಮಪಡಬೇಕಾಗುತ್ತದೆ. ಆ ಕ್ಷಣದ ಸುಖದ ಮೌಲ್ಯ ಹೆಚ್ಚು. ಅದರೆ ಅನುಭವಿಸಲ್ಪಡುವ ಕಾಲ ಮಾತ್ರ ಕಡಿಮೆ.