ಗಳಿಗೆ ಕೂಡಿ ಬಂದಾಗ ಏನೆಲ್ಲಾ ಒದಗಿಬರುತ್ತದೆ?
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ|
ತಿಳಿವುಮೊಳ್ತನಮುಂ ವಿರಕ್ತಿಯುಂ ಮುಕ್ತಿಯುಂಗಳಿಗೆ ಸರಿಸೇರ್ದಂದು – ಮಂಕುತಿಮ್ಮ.||
ಮಳೆಕಾಲಕ್ಕೊಂದು, ಬೆಳೆಗೊಂದು ಫಸಲು ಬರುವುದುಕ್ಕೊಂದು ಋತುಗಳಿರುವಂತೆ ಕಾಲದ ನಿಯಮ ಜೀವವೆಂಬ ಮರವನ್ನು ಬೆಳೆಸುತ್ತದೆ. ತಿಳುವಳಿಕೆ, ಒಳ್ಳೆಯತನ, ವೈರಾಗ್ಯ ಮತ್ತು ಮೋಕ್ಷ ಇವುಗಳು ಕೂಡ ಸಮಯ ಬಂದಾಗ ಬಂದೊದಗುತ್ತವೆ.
ಋತು ಚಕ್ರ ನಿರಂತರವಾಗಿ ತಿರುಗುತ್ತಲೇ ಇರುತ್ತದೆ. ಒಂದೊಂದು ಋತುವಿನಲ್ಲಿ ಒಂದೊಂದು ಬದಲಾವಣೆಯಾಗುತ್ತಲೇ ಇರುತ್ತದೆ. ಮಳೆಗಾಲಕ್ಕೆ ಒಂದು ಋತು ಇರುತ್ತದೆ. ಬೆಳೆ ಬೆಳೆಯುವುದು ಒಂದು ಋತುವಿನಲ್ಲಿ. ಫಸಲು ಬರುವುದಕ್ಕೆ ಇನ್ನೊಂದು ಋತು. ಹೀಗೆ ಕಾಲದ ನಿಯಮಗಳು ಜೀವವೆಂಬ ವೃಕ್ಷವನ್ನು ಬೆಳೆಯಿಸುತ್ತದೆ. ನಮಗೆ ಬದುಕಿನಲ್ಲಿ ಸರಿಯಾದ ತಿಳುವಳಿಕೆ ಮೂಡಬೇಕಾದರೂ ಸಮಯ ಕೂಡಿ ಬರಬೇಕಾಗುತ್ತದೆ. ಹಾಗೆಯೇ ಒಳ್ಳೆಯತನ, ವಿರಕ್ತಿ ಹಾಗೂ ಮೋಕ್ಷ ಇವೆಲ್ಲವೂ ಸಮಯ ಕೂಡಿಬಂದಾಗ ತಾವಾಗಿಯೇ ಒದಗಿಬರುತ್ತವೆ.