ಯಾವುದು ಧರ್ಮ?
ಗೃಹದಿ ರಾಷ್ಟ್ರದಿ ಸಮಾಜದಿ ಲೋಕ ಸಂಗತದಿ ವಿಹಿತದ ಸ್ಥಾನದಿಂ ಸಹಜಗುಣಬಲದಿಂದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ ಸಹಕರಿಪುದಲೆ ಧರ್ಮ – ಮಂಕುತಿಮ್ಮ||
ಮನೆಯಲ್ಲಿ, ದೇಶದಲ್ಲಿ, ಸಮಾಜದಲ್ಲಿ, ಜನರ ಜೊತೆಯಲ್ಲಿ ಯೋಗ್ಯವಾದ ಸ್ಥಾನದಿಂದ, ಸಹಜವಾದ ಗುಣಗಳ ಬಲದಿಂದ, ಇಹಕ್ಕೂ ಪರಕ್ಕೂ ಹೊಂದಾಣಿಕೆಯಾಗುವಂತೆ, ಎಲ್ಲರ ಹಿತಕ್ಕಾಗಿ, ಒಳ್ಳೆಯ ಸ್ಥಿತಿಗಾಗಿ ಸಹಕರಿಸುವುದೇ ಧರ್ಮ.
‘ಧರ್ಮ’ ಜಗತ್ತಿನ ಎಲ್ಲರ ಹಿತವನ್ನು ಕಾಪಾಡುವಂತಿರಬೇಕು. ಅದು ಮನೆಯಿಂದಲೇ ಆರಂಭವಾಗುತ್ತದೆ. ಮೊದಲು ಮನೆಯಲ್ಲಿ ಎಲ್ಲರ ಜೊತೆ ಸಮನ್ವಯತೆಯನ್ನು ಸಾಧಿಸಬೇಕು. ಅದು ಮುಂದೆ ಸಮಾಜ, ದೇಶ, ಲೋಕದ ಜನರ ಜೊತೆ ಸಮನ್ವಯ ಸಾಧಿಸಲು ಸಹಕಾರಿಯಾಗುತ್ತದೆ. ಇಲ್ಲಿ ತನಗೆ ಸಿಕ್ಕ ಯೋಗ್ಯ ಸ್ಥಾನದಿಂದಲೇ ಸಹಜವಾದ ಗುಣಗಳ ಬಲದಿಂದ ಬಾಳುತ್ತಾ ಇಹಕ್ಕೂ ಪರಕ್ಕೂ ಒಳಿತಾಗುವಂತೆ ದುಡಿಯಬೇಕು. ಜಗತ್ತಿನ ಎಲ್ಲರ ಒಳಿತಿಗಾಗಿ, ಸಮನ್ವಯ ಭಾವದಿಂದ ಸಹಕರಿಸಿದರೆ ಅದೇ ನಿಜವಾದ ಧರ್ಮ. ಅದು ಸಮಗ್ರ ಜೀವ ಸಂಕುಲದ ಹಿತವನ್ನು ಕಾಪಾಡುವಂತಿರಬೇಕು.