ವಿದ್ಯುತ್ ಕಂಬದಲ್ಲೇ ಶವವಾದ ಲೈನ್ ಮ್ಯಾನ್, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಲೈನ್ ಬದಲಾವಣೆ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ಲೈನ್ ಮ್ಯಾನ್ ಮೃತಪಟ್ಟಿರುವ ದುರ್ಘಟನೆ ಬುಧವಾರ ನಡೆದಿದೆ.
ಮೃತ ದುರ್ದೈವಿ ಲೈನ್ ಮ್ಯಾನ್ ಅಜ್ಜಯ್ಯ( 29), ದೂಪದಹಳ್ಳಿ ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ವಿದ್ಯುತ್ ಕಂಬ ಮೇಲೇರಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ಜರುಗಿದೆ.

ಕೆಲಸಕ್ಕೂ ಮುನ್ನ ಕೊಟ್ಟೂರು ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸೂಚಿಸಿದ್ದಾನೆ. ಬಳಿಕ ಕಂಬ ಹತ್ತಿದ್ದಾನೆ ಎನ್ನಲಾಗಿದೆ. ಆದರೆ ಕಂಬದ ಮೇಲೇರಿ ಕೆಲಸ ನಿರ್ವಹಿಸುತ್ತಿದ್ದಾಗ ಏಕಾಏಕಿ ಲೈನ್ ನಲ್ಲಿ ವಿದ್ಯುತ್ ಪೂರೈಕೆಯಾದ ಹಿನ್ನಲೆಯಲ್ಲಿ ಕಂಬದ ಮೇಲೆ ಲೈನ್ ಮ್ಯಾನ್ ಶವವಾಗಿದ್ದಾನೆ.
ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕರ್ತವ್ಯನಿರತ ಲೈನ್ ಮ್ಯಾನ್ ಕಂಬದ ಮೇಲೆಯೇ ಶವವಾಗಿ ನೇತಾಡುತ್ತಿರುವ ದೃಶ್ಯ ಮನ ಕಲಕುವಂತಿದೆ.
ಜೆಸ್ಕಾಂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ, ಲೈನ್ ಬದಲಾವಣೆ ಮಾಡಲು ಸೂಚಿರುವ ತಪ್ಪು ಮಾಹಿತಿ ನೀಡಿರೋದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಮೃತ ಲೈನ್ ಮ್ಯಾನ್ ಅಜ್ಜಯ್ಯನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜೆಸ್ಕಾಂ ಮೇಲಾಧಿಕಾರಿಗಳು ಬರುವಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಆಗ್ರಹಿದ್ದಾರೆ. ವಿದ್ಯುತ್ ಕಂಬದ ಮೇಲಿಂದ ಮೃತದೇಹವನ್ನು ಕೆಳಗಿಸದಂತೆ ಪಟ್ಟುಹಿಡಿದಿದ್ದಾರೆ.
ಈ ಸಾವಿಗೆ ಜೆಸ್ಕಾಂ ಇಲಾಖೆ ಮೇಲಾಧಿಕಾರಿಗಳೇ ಕಾರಣ, ಅವರ ನಿರ್ಲಕ್ಷ್ಯದಿಂದಲೇ ಈ ಸಾವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೂಡಲೇ ಜೆಇ ಬರಬೇಕು ಅಲ್ಲಿಯವರೆಗೂ ಮೃತದೇಹ ಕೆಳಗಿಸಲು ಬಿಡೋದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ.
ಮೃತದೇಹ ಕೆಳಗಿಳಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕೊಟ್ಟೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.