ಆತ್ಮಬುದ್ಧಿ ಯಾವಾಗ ಕಾಣಿಸಿಕೊಳ್ಳುತ್ತದೆ?
ಹಾಲ ಕಾಯಿಸಿ ಹೆಪ್ಪನಿಕ್ಕಿಕಡೆದೊಡೆ, ಮೊದಲು ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ |
ಬಾಳನೀ ಜಗದ ಮಂತವು ಕಡೆಯಲೇಳುವುದು ಆಳದಿಂದಾತ್ಮಮತಿ – ಮಂಕುತಿಮ್ಮ ||
ಹಾಲನ್ನು ಕಾಯಿಸಿ ಹೆಪ್ಪನ್ನು ಹಾಕಿ, ಕಡೆದಾಗ ಮೊದಲು ಮೇಲೆ ಕಾಣಿಸಿಕೊಳ್ಳದ ಬೆಣ್ಣೆ ತೇಲಿ ಬರುವಂತೆ, ಈ ಜಗತ್ತಿನ ಕಡೆಗೋಲು ನಮ್ಮ ಬಾಳನ್ನು ಕಡೆದಾಗ ಆಳದಿಂದ ಮೇಲೆದ್ದು ಆತ್ಮಬುದ್ಧಿ ಕಾಣಿಸಿಕೊಳ್ಳುತ್ತದೆ.
ಹಾಲಿನಲ್ಲಿ ಬೆಣ್ಣೆ ಅಡಗಿದ್ದರೂ ಅದು ಕಾಣಿಸಿಕೊಳ್ಳುವುದಿಲ್ಲ. ಆದರೆ ಅದನ್ನು ಕಾಯಿಸಿ, ಅದಕ್ಕೆ ಹೆಪ್ಪು ಹಾಕಿ, ಮೊಸರಾದಾಗ ಕಡೆದರೆ ಮೊದಲು ಕಾಣಿಸದಂತಹ ಬೆಣ್ಣೆ ತೇಲಿ ಬರುತ್ತದೆ. ಹಾಗೆಯೇ ಈ ಜಗತ್ತಿನಲ್ಲಿ ಕಡೆಗೋಲು ನಮ್ಮ ಬಾಳನ್ನು ಕಡೆದಾಗ ಆಳದಿಂದ ಆತ್ಮಬುದ್ಧಿ ಮೇಲೆದ್ದು ಬಂದು ಕಾಣಿಸಿಕೊಳ್ಳುತ್ತದೆ. ಜಗತ್ತಿನ ಕಷ್ಟಗಳು ನಮಗೆ ಆತ್ಮಶಕ್ತಿಯನ್ನು ವರ್ಧಿಸುವಂತೆ ಮಾಡುತ್ತವೆ. ಇಂತಹ ಕಷ್ಟಗಳನ್ನು ಎದುರಿಸಿ ನಮ್ಮ ಬದುಕು ಪಾಕಗೊಳ್ಳುತ್ತದೆ. ಆಗಲೇ ನಮಗೆ ಆತ್ಮಜ್ಞಾನದ ಅರಿವು ಮೂಡುತ್ತದೆ.