ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡರೆ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹಗರಿಬೊಮ್ಮನಹಳ್ಳಿ ಉಪ ತಹಶೀಲ್ದಾರ ಶಿಲ್ಪಾ ಮೇಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಆರು ತಿಂಗಳ ಕಾಲ ಉಚಿತ ಹೊಲಿಗೆಯಂತ್ರ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಣೆ ಮಾಡಿ ಅವರು ಮಾತನಾಡಿದರು, ಮಹಿಳೆ ಸ್ವಯಂ ಉದ್ಯೋಗ ಪಡೆದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ಅರ್ಥಿಕವಾಗಿ ಸಶಕ್ತಳಾಗಲು ಸಾಧ್ಯವಿದೆ. ಇಡೀ ಕುಟುಂಬವನ್ನು ಸಲಹುವ ಹೆಣ್ಣು ಆರ್ಥಿಕವಾಗಿ ಬಲಿಷ್ಟರಾದರೇ ಕೌಟುಂಬಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಳು, ಕುಟುಂಬಗಳು ಆರ್ಥಿಕವಾಗಿ ಸಬಲರಾದರೇ ಇಡೀ ದೇಶವೇ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರನ್ನು ಗುರುತಿಸಿ ಅವರಿಗೆ ಹೊಲಿಗೆ ತರಬೇತಿ ನೀಡಿ ಕೌಶಲ್ಯತೆಯನ್ನು ಹೆಚ್ಚಿಸಿ, ಉಚಿತವಾಗಿ ಹೊಲಿಗೆ ಯಂತ್ರ ನೀಡುವ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಸಿಕೊಡುವ ಕೆಲಸವನ್ನು ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿ ಪರೋಕ್ಷವಾಗಿ ಸಮಾಜಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದಂತೆ ಎಂದರು.

ಆರು ತಿಂಗಳ ಕಾಲ ಉಚಿತ ಹೊಲಿಗೆ ಯಂತ್ರ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹೊಲಿಗೆ ಯಂತ್ರ ಮತ್ತು ಪ್ರಮಾಣ ಪತ್ರಗಳನ್ನ ವಿತರಣೆ ಮಾಡಲಾಯಿತು.
ಸಿಎಸ್.ಆರ್ ವಿಭಾಗದ ಮುಖ್ಯಸ್ಥ ಮಾರುತಿ ಗೋಶಿ ಪ್ರಾಸ್ತವಿಕವಾಗಿ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಟೈಲರಿಂಗ್ ವೃತ್ತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕೆಲವು ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ವಿದ್ಯಾರ್ಥಿ ಮಿತ್ರ, ರೈತ ಮಿತ್ರ, ಸಾಮಾಜಿಕ ಮಿತ್ರ ಮತ್ತು ಆರೋಗ್ಯ ಮಿತ್ರ ವಿಭಾಗಗಳಲ್ಲಿ ಎಸ್‌ಎಲ್‌ಆರ್ ಕಂಪನಿ ಸಿಎಸ್‌ಆರ್ ಯೋಜನೆಯಡಿಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಅದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದರು.
ಇದೇ ವೇಳೆ ಎಸ್‌ಎಲ್‌ಆರ್ ಮೆಟಾಲಿಕ್ಸ್ ಸಿಬ್ಬಂದಿ ಸಿಂಧು ಶಿಶುನಹಳ್ಳಿ ಮಾತನಾಡಿ, ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶವನ್ನು ಒದಗಿಸುಲು ಸಹಾಯ ಮಾಡಲಿದ್ದು, ತಮ್ಮದೇ ಆದ ಕೌಶಲ್ಯವನ್ನು ಬಳಸಿಕೊಂಡು ಜೀವನೋಪಾಯ ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಶಿಲ್ಪಾ ಪರಶುರಾಮ, ಹನುಮಂತಪ್ಪ, ಗ್ರಾಮಾಡಳಿತಾಧಿಕಾರಿ ಮಂಜುನಾಥ, ಬಿ.ಎಸ್.ರಾಜಪ್ಪ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮರಾಜ.ಯು, ಸಂಸ್ಥೆಯ ತರಬೇತಿದಾರ ಸುವರ್ಣಮ್ಮ ಹಾಗೂ ಗ್ರಾಮದ ಮುಖಂಡರಾದ ಪರಶುರಾಮ, ಹನುಮಂತಪ್ಪ, ಮೈಲಾರಪ್ಪ, ಹುಲಗಪ್ಪ, ರಾಜು ಇತರರಿದ್ದರು.