- ಪ್ರಾಚೀನ ದೇಗುಲದ ಪ್ರಾಂಗಣ ಅಗೆದ ನಿಧಿಗಳ್ಳರು.
- ದೂರು ದಾಖಲಿಸಲು ಚಿಲುಗೋಡು ಗ್ರಾಮಸ್ಥರು ಮೀನಾಮೇಷ?
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ಚಿಲುಗೋಡು ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇಗುಲದ ಗರ್ಭಗುಡಿ ಮುಂದಿನ ಪ್ರಾಂಗಣವನ್ನು ದುಷ್ಕರ್ಮಿಗಳು ನಿಧಿ ಆಸೆಗೆ ಅಗೆದು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಸುಮಾರು 11ನೇ ಶತಮಾನದ ಪುರಾತನ ದೇವಸ್ಥಾನವಾಗಿರುವ ಹಿನ್ನಲೆಯಲ್ಲಿ ಹಿಂದೆ ರಾಜರ ಆಳ್ವಿಕೆಯಲ್ಲಿ ದೇಗುಲಗಳಲ್ಲಿ ನಿಧಿ ಸಂಗ್ರಹಿಸಿಟ್ಟಿರಬಹುದೆಂಬ ಮೌಢ್ಯತೆಯಿಂದ ಈ ದೇವಸ್ಥಾನವನ್ನು ಈಗಾಗಲೇ ಐದಾರು ಬಾರಿ ನಿಧಿಚೋರರು ವಿರೂಪಗೊಳಿಸಿದ್ದಾರೆ. ಒಂದೊಮ್ಮೆ ಗರ್ಭಗುಡಿ ಆವರಣದಲ್ಲಿ ಅಗೆದು ಶೋಧಿಸಿದ್ದರು. ಗರ್ಭಗುಡಿ ಮುಂದಿನ ಪ್ರಾಂಗಣದಲ್ಲಿ ಇದು ಮೂರನೇ ಬಾರಿ.ದೇಗುಲದಲ್ಲಿನ ಬೃಹತ್ ಗಾತ್ರದ ಬಂಡೆ ಸರಿಸಿ ನಾಲ್ಕೈದು ಅಡಿಯಲ್ಲಿ ಮಣ್ಣು ತೆಗೆದು ನಿಧಿ ಇರುವ ಶಂಕೆಯಿಂದ ಕಳ್ಳರು ಶೋಧಿಸಿದ್ದಾರೆ.ಶೋಧನೆ ಬಳಿಕ ಕಳ್ಳರಿಗೆ ಏನಾದರೂ ಸಿಕ್ಕಿದಿಯೋ, ಇಲ್ಲವೋ ಗೊತ್ತಿಲ್ಲ ಆದರೆ ನಿರಂತರ ದೇಗುಲದ ಮೇಲೆ ದಾಳಿ ಮಾತ್ರ ನಿಂತಿಲ್ಲ.
ದೇವಸ್ಥಾನದ ಆವರಣದಲ್ಲಿ ಶಾಸನವೊಂದು ಇದೆ. ಇದರ ಪ್ರಕಾರ 11ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ 6ನೇ ವಿಕ್ರಮಾದಿತ್ಯನ ಅವಧಿಯಲ್ಲಿ ಸಾಮಂತರಾಗಿದ್ದ ನೊಳಂಬವಾಡಿಯ ಮಹಾಮಂಡಲೇಶ್ವರನಾದ ತ್ರಿಭುವನ ಮಲ್ಲಪಾಂಡ್ಯದೇವರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದರೂ ಪುರಾತತ್ವ ಇಲಾಖೆಗೆ ಸಂಬಂಧಿಸಿಲ್ಲ. ಸ್ಥಳೀಯವಾಗಿ ಗ್ರಾಮಸ್ಥರು ‘ಪುರಾತನ ಶ್ರೀಕಲ್ಲೇಶ್ವರ ಸಮಿತಿ’ ಎಂದು ರಚಿಸಿ
ದೇಗುಲದ ರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ದಾರೆ ಎನ್ನುವುದು ಬಿಟ್ಟರೆ ನಿಧಿಗಳ್ಳತನ ನಡೆದಾಗ ಕನಿಷ್ಟ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿಲ್ಲ. ಈ ನಡೆಗೆ ಗ್ರಾಮದ ಯುವಕರ ವಿರೋಧ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಐತಿಹಾಸಿಕ ದೇಗುಲದ ಸಂರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು. ನಿಧಿಗಳ್ಳರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.