‘ಕರ್ನಾಟಕ ದರ್ಶನ’ಮಕ್ಕಳ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಟೂರಿಸಂ ಡಿಡಿ ಪ್ರಭುಲಿಂಗಪ್ಪ ತಳಕೇರಿ ಚಾಲನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
2024-25 ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ 149 ವಿದ್ಯಾರ್ಥಿಗಳ ಮೊದಲನೆ ಬ್ಯಾಚ್‌ಗೆ ನಗರದ ಪಟೇಲ್ ಶಾಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗಪ್ಪ.ಎಸ್.ತಳಕೇರಿ ಚಾಲನೆ ನೀಡಿದರು.
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯಿಂದ ಪರಿಶಿಷ್ಟ ಜಾತಿಯ 376, ಪರಿಶಿಷ್ಟ ಪಂಗಡದ 365 ಸೇರಿದಂತೆ ಒಟ್ಟು 741 ಗುರಿಯನ್ನು ನಿಗದಿಪಡಿಸಲಾಗಿದೆ. ಅದರಂತೆ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಆಕರ್ಷಕ ಬ್ಯಾಗ್, ನೋಟ್ ಬುಕ್, ಟೀ-ಶರ್ಟ್, ಕ್ಯಾಪ್, ಪೆನ್, ಕರ್ನಾಟಕ ಮ್ಯಾಪ್, ಸ್ನಾನದ ಕಿಟ್ ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಲಾಗುವುದು. ಒಟ್ಟು ನಾಲ್ಕು ದಿನಗಳ ಈ ಪ್ರವಾಸದಲ್ಲಿ ಚಿತ್ರದುರ್ಗ, ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ತಲಕಾವೇರಿ, ಮಡಿಕೇರಿ, ಬೈಲುಕುಪ್ಪೆ, ಮೈಸೂರು, ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳನ್ನು ಸಂದರ್ಶಿಸುವರು ಎಂದರು.
ಈ ವೇಳೆ ಹೊಸಪೇಟೆ ಬಿಇಒ ಎಂ.ಚನ್ನಬಸಪ್ಪ ಸೇರಿ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಅನುಷ್ಟಾನ ಸಂಸ್ಥೆಯಾದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.