ನಿಯಮಿತ ಬದುಕು ಯಾರಿಗಿಲ್ಲ?
ತರಣಿಶಶಿಪಥಗಳನು ಧರೆವರುಣಗತಿಗಳನು ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ |ನರನರಸಿಕೊಳಲಿ ದಾರಿಯ ತನಗೆ ತಾನೆಂದು ತೊರೆದನೇತಕೆ ನಮ್ಮ? – ಮಂಕುತಿಮ್ಮ ||
ಸೂರ್ಯಚಂದ್ರರ ದಾರಿಗಳನ್ನು, ಭೂಮಿ ನೀರುಗಳ ಚಲನೆಯನ್ನು ವಾಯು ಅಗ್ನಿಗಳ ವೇಗಗಳನ್ನು ನಿಯಮಕ್ಕೊಳಪಡಿಸಿದ ಆ ಪರಮಾತ್ಮನು, ಮನುಷ್ಯನು ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳಲಿ ಎಂದು ನಮ್ಮನ್ನು ಏಕೆ ಬಿಟ್ಟುಬಿಟ್ಟಿದ್ದಾನೆ.
ಭಗವಂತ ಈ ವಿಶ್ವದಲ್ಲಿ ಎಲ್ಲದಕ್ಕೂ ಒಂದು ನಿಯಮವನ್ನು ವಿಧಿಸಿದ್ದಾನೆ. ಸೂರ್ಯ ಚಂದ್ರರು ಸದಾ ತಮ್ಮ ಪಥದಲ್ಲಿಯೇ ಸಾಗುವಂತೆ ಮಾಡಿದ್ದಾನೆ. ಈ ಭೂಮಿಗೆ ಒಂದು ನಿರ್ದಿಷ್ಟ ಚಲನೆಯನ್ನು ನಿಯಮಿಸಿದ್ದಾನೆ. ನೀರು ಸದಾ ಮೇಲಿನಿಂದ ಕೆಳಕ್ಕೆ ಹರಿಯುತ್ತದೆ. ಗಾಳಿಗೂ ಒಂದು ನಿಯಮವಿದೆ. ಅಗ್ನಿ ಸದಾ ಮೇಲ್ಮುಖವಾಗಿಯೇ ಉರಿಯುತ್ತದೆ. ಇಷ್ಟೆಲ್ಲ ನಿಯಮಿಸಿದ ಭಗವಂತ ಮನುಷ್ಯನಿಗೇಕೆ ನಿಯಮವನ್ನು ವಿಧಿಸಿಲ್ಲ? ಅವನ ದಾರಿಯನ್ನು ಅವನೇ ನೋಡಿಕೊಳ್ಳಲಿ ಎಂದು ನಮ್ಮನ್ನೇಕೆ ತೊರೆದು ಬಿಟ್ಟಿದ್ದಾನೆ? ಪ್ರಕೃತಿಯಲ್ಲಿ ಎಲ್ಲವೂ ಬಂದು ನಿಯಮಕ್ಕೆ ಬದ್ಧವಾಗಿ ನಡೆಯುತ್ತವೆ. ಸೂರ್ಯೋದಯ ಚಂದ್ರೋದಯಗಳು ನಿಗದಿತ ಸಮಯದಲ್ಲಿಯೇ ನಡೆಯುತ್ತವೆ. ಪ್ರಾಣಿ-ಪಕ್ಷಿಗಳು ಅರುಣೋದಯಕ್ಕೆ ಎಚ್ಚೆತ್ತು ತಮ್ಮ ದಿನಚರಿ ಆರಂಭಿಸುತ್ತವೆ. ಆದರೆ ಮನುಷ್ಯ ಮಾತ್ರ ಈ ನಿಯಮಗಳಿಗೆ ಅಂಟಿಕೊಂಡಿಲ್ಲ. ಬೆಳಗು ಅವನನ್ನು ಎಚ್ಚರಿಸುವುದಿಲ್ಲ. ಕೆಲವೊಮ್ಮೆ ಬಿಸಿಲು ಅವನನ್ನು ಜಾಗ್ರತಗೊಳಿಸುವತ್ತ ಸೋತು ಬಿಡುತ್ತದೆ. ಮನುಷ್ಯನ ಚಲನವಲನಗಳಲ್ಲಿಯೂ ಒಂದು ನಿಯಮವಿಲ್ಲ. ಅವನ ಬಗ್ಗೆ ಇದಮಿತ್ಥಂ ಎಂದು ತೀರ್ಮಾನ ತೆಗೆದುಕೊಳ್ಳಲಾಗದು. ಭಗವಂತ ಹೀಗೇಕೆ ಮಾಡಿದ?