ಧಗ ಧಗನೇ ಹೊತ್ತಿ ಉರಿದ ಆಕರ್ಷಕ ವಿಂಟೇಜ್ ಕಾರು ! ಸ್ಥಳಕ್ಕೆ ದೌಡಾಯಿಸಿದ ಶಾಸಕ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ) .
ಹೊಸಪೇಟೆ ತಾಲೂಕಿನ ರಾಯರ ಕೆರೆ ಬಳಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಚರಿಸುತ್ತಿದ್ದ ವಿಂಟೇಜ್ ಕಾರು ಧಗ ಧಗನೆ ಹೊತ್ತಿ ಉರಿದ ಘಟನೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಹೊಸಪೇಟೆಯಲ್ಲಿ ಏರ್ಪಡಿಸಿದ್ದ ವಿಂಟೇಜ್ ಸಂಭ್ರಮದಲ್ಲಿ ಭಾಗಿಯಾಗಿದ್ದ ಕಾರು, ಇಂದು ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಗಮನಿಸಿ ತುರ್ತು ಕಾರಿನಿಂದ ಕೆಳಗಿಳಿದು ಪ್ರಾಣಾಹಾನಿಯಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರ ಆಕರ್ಷಣೆಗಾಗಿ ಆಯೋಜಿಸಲಾಗಿದ್ದ ವಿಂಟೇಜ್ ಸಂಭ್ರಮ 100 ವರ್ಷ ಪೂರೈಸಿದ ಹಿನ್ನಲೆಯಲ್ಲಿ 20 ಕಾರುಗಳು ಭಾಗಿಯಾಗಿ ಹೊಸಪೇಟೆ ನಗರ ಸೇರಿದಂತೆ ವಿವಿಧೆಟೆ ಸಂಚರಿಸಿ ತುಂಬಾ ಆಕರ್ಷಣೆ ಮೂಡಿಸಿದ್ದವು. ವಿಂಟೇಜ್ ಸಂಭ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಕಾರುಗಳು ಐತಿಹಾಸಿಕ ಹಂಪಿ ಹಾಗೂ ಅಂಜನಾದ್ರಿ ಸೇರಿದಂತೆ ವಿವಿಧೆಡೆ ಸಂಚರಿಸಿ ವಿಂಟೇಜ್ ಕಾರುಗಳು ನೋಡುಗರ ಗಮನ ಸೆಳೆದಿದ್ದವು, ಶಾಸಕ ಎಚ್.ಆರ್.ಗವಿಯಪ್ಪರವರ ಅಹ್ವಾನದ ಮೇರೆಗೆ ಆಗಮಿಸಿದ್ದ ವಿಂಟೇಜ್ ಕಾರುಗಳ ಆಯೋಜಕರು ಸಂಭ್ರಮದಲ್ಲಿ ಭಾಗವಹಿಸಿದ್ದರು. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.