ಯಾರು ನಮಗೆ ಎದುರಾಳಿ ?
ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ |
ಕ್ರಮವೊಂದೆ ನೀಮಾಗಿಸಿರಿ ನೋಳ್ವೆನಾನೆನುತೆ ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ ||
ಈ ಸೃಷ್ಟಿಯಲ್ಲಿ ಯಾವುದು ಸಮವಿಲ್ಲ. ಮನುಷ್ಯನಂತೆ ಮನುಷ್ಯನಿಲ್ಲ ಕ್ಷಮೆಯೂ ಅವಳಲಿಲ್ಲ. ಕರ್ಮದಂತೆ ಫಲ ದೊರೆಯುತ್ತದೆ “ಒಂದು ಕ್ರಮದಲ್ಲಿ ಇದನ್ನು ನೀವು ಮಾಡಿ ನಾನು ನೋಡುತ್ತೇನೆ” ಎನ್ನುತ್ತಾ ನಮಗವಳು ಎದುರಾಳಿಯಾಗಿದ್ದಾಳೆ.
ಸೃಷ್ಟಿಯ ಕ್ರಮದಲ್ಲಿ ಎಲ್ಲವೂ ಸಮಾನತೆ ಕಂಡುಬರುವುದಿಲ್ಲ. ಒಬ್ಬ ಮನುಷ್ಯ ಇನ್ನೊಬ್ಬನಂತೆ ಇರುವುದಿಲ್ಲ. ಒಂದು ಮರ ಇನ್ನೊಂದರಂತೆ ಇರುವುದಿಲ್ಲ. ಒಂದು ಹೂವು ಇನ್ನೊಂದರಂತೆ ಇರುವುದಿಲ್ಲ. ಅವಳು ಯಾರನ್ನು, ಯಾವ ಕಾರಣಕ್ಕು ಕ್ಷಮಿಸುವುದಿಲ್ಲ. ತಪ್ಪು ಮಾಡಿದವನು ಅವಳ ನ್ಯಾಯ ಸ್ಥಾನದಲ್ಲಿ ಶಿಕ್ಷೆ ಅನುಭವಿಸಲೇಬೇಕು. ಈಗೀಗ ಮನುಷ್ಯ ಪ್ರಕೃತಿಯನ್ನು ಬೇಕಾಬಿಟ್ಟಿ ನಾಶ ಮಾಡಹತ್ತಿದ್ದಾನೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಮಳೆಯೇ ಬರದಿದ್ದರೆ ಯಾರನ್ನು ದೂರುವುದು? ಮಾಡಿದ್ದುಣ್ಣೋ ಮಹಾರಾಯ! ಅವಳು ಕೊಡುವ ಶಿಕ್ಷೆಗೆ ಎಲ್ಲರೂ ತಲೆಬಾಗಲೇಬೇಕು. ನಾವೇನಾದರೂ ಇವೆನೆಲ್ಲ ಸಕ್ರಮಗೊಳಿಸುತ್ತೇವೆ ಎಂದು ಹೊರಟರೆ ಅವಳು ನಮಗೆ ಎದುರಾಳಿಯಾಗಿ ನಿಲ್ಲುತ್ತಾಳೆ. ನೀವಿದನ್ನು ಕ್ರಮಬದ್ಧವಾಗಿಸಿರಿ. ನಾನು ನೋಡಿಬಿಡುತ್ತೇನೆಂದು ನಮಗವಳು ಪಂಥಾಹ್ವಾನ ನೀಡುತ್ತಾಳೆ. ಈ ವಿಷಯದಲ್ಲಿ ಮನುಷ್ಯ ಅಸಹಾಯಕನೇ ಸರಿ.