ಮನುಷ್ಯ ಯಾವುದರ ಶಿಷ್ಯ?
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ ಕಾಣಿಸುವರನ್ನವನು? ಹಸಿವವರ ಗುರುವು |
ಮಾನವನುಮಂತುದರ ಶಿಷ್ಯನವನಾ ರಸನೆ ನಾನಾವಯವಗಳಲಿ – ಮಂಕುತಿಮ್ಮ ||
ಆನೆ, ಇರುವೆ, ಕಾಗೆ, ಕಪ್ಪೆಗೆ ಅನ್ನವನು ಕಾಣಿಸುವವರು ಯಾರು? ಹಸಿವೇ ಅವುಗಳ ಗುರು, ಹಾಗೆಯೇ ಮಾನವನೂ ಕೂಡ ಹೊಟ್ಟೆಯ ಶಿಷ್ಯ. ಅವನ ನಾಲಿಗೆ ನಾನಾ ಅವಯವಗಳಲ್ಲಿ ಚಾಚಿಕೊಂಡಿರುತ್ತದೆ.
ಈ ಪ್ರಪಂಚದಲ್ಲಿ ಜನಿಸಿದ ಪ್ರತಿಯೊಂದು ಜೀವಿಯೂ ತನ್ನ ಆಹಾರವನ್ನು ತಾನೇ ಪಡೆಯುತ್ತದೆ. ಆನೆಗಾಗಲೀ, ಇರುವೆಗಾಗಲೀ, ಕಾಗೆಗಾಗಲೀ, ಕಪ್ಪರಗಾಗಲೀ ಊಟವನ್ನು ಯಾರೂ ತಂದು ಕೊಡುವುದಿಲ್ಲ. ಅವೇ ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ. ಅವುಗಳ ಹಸಿವೇ ಈ ವಿಷಯದಲ್ಲಿ ಅವುಗಳ ಗುರು. ಮಾನವನೂ ಕೂಡ ಹೊಟ್ಟೆಯ ಶಿಷ್ಯನೇ. ‘ಎಲ್ಲಾರೂ ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ’ ಎಂದು ದಾಸರು ಹಾಡಿದರು. ಪ್ರಾಣಿಗಳು ಹೊಟ್ಟೆ ತುಂಬಿದರೇ ಅವು ಸುಮ್ಮನೆ ಮಲಗಿ ನಿದ್ರಿಸುತ್ತವೆ. ಮಾನವ ಮಾತ್ರ ಅವುಗಳಿಗಿಂತ ಭಿನ್ನವೇ ಆಗಿರುತ್ತಾನೆ. ಅವನಿಗೆ ನಾಲಿಗೆ ಒಂದೇ ಆಗಿದ್ದರೂ ನಾನಾ ಅವಯವಗಳಲ್ಲಿ ಅದು ಮೂಡಿ ಪ್ರಭಾವ ಬೀರುತ್ತದೆ. ಹೊಟ್ಟೆ ತುಂಬಿದರೆ ಸುಮ್ಮನಿರುವ ಪ್ರಾಣಿ ಅವನಲ್ಲ. ಯಾವುದಾದರೂ ಸುಂದರ ರೂಪವನ್ನು ನೋಡಿದಾಕ್ಷಣ ಅತ್ತಕಡೆ ಆಕರ್ಷಿತನಾಗುತ್ತಾನೆ. ಅವನ ಇಂದ್ರಿಯಗಳು ಕೇಳಿದ್ದನೆಲ್ಲಾ ಒದಗಿಸುವ ಪ್ರಯತ್ನ ಮಾಡುತ್ತಾನೆ. ಒಂದು ರೀತಿಯಲ್ಲಿ ಅವನ ಇಂದ್ರಿಯಗಳೆಲ್ಲಾ ನಾಲಿಗೆಗಳೇ ಆಗಿರುತ್ತವೆ.