ಬಾಳಿನ ಚಿರಧರ್ಮ ಯಾವುದು ?
ಬೀಳುವುದ ನಿಲ್ಲುಪುದು, ಬಿದ್ದುದನು ಕಟ್ಟುವುದು ಹಾಲೊಡೆಯೆ ಕಡೆದದನು ತಕ್ರವಾಗಿಪುದು |
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು ಬಾಳಗಿನ ಚಿರಧರ್ಮ – ಮಂಕುತಿಮ್ಮ ||
ಬೀಳುವುದನ್ನು ಬೀಳದಂತೆ ನಿಲ್ಲಿಸುವುದು, ಬಿದ್ದು ಹೋಗಿರುವುದನ್ನು ಮತ್ತೆ ಕಟ್ಟುವುದು, ಹಾಲು ಒಡೆದು ಹೋದಾಗ ಅದನ್ನು ಕಡೆದು ಮಜ್ಜಿಗೆಯನ್ನಾಗಿ ಮಾಡುವುದು, ಹಾಳನ್ನು ಹಾಳಾಗುವಂತೆ ಮಾಡುವುದು ಹಳೆಯದಾಗಿರುವುದನ್ನು ಹೊಸತನ್ನಾಗಿ ಮಾಡುವುದು ಬಾಳಿನ ಶಾಶ್ವತವಾದ ಧರ್ಮ.
ಮನುಷ್ಯನ ಜೀವನವೆಂಬುದು ಸದಾ ಚಟುವಟಿಕೆಗಳ ಚಿಲುಮೆ. ಮನುಷ್ಯ ಈ ಭೂಮಿಯಲ್ಲಿ ಬದುಕಿರುವಷ್ಟು ಕಾಲ ಏನಾದರೊಂದನ್ನು ಮಾಡುತ್ತಲೇ ಇರುತ್ತಾನೆ. ಕೆಳಗೆ ಬೀಳುತ್ತಿರುವುದನ್ನು ಬೀಳದಂತೆ ನಿಲ್ಲಿಸುತ್ತಾನೆ. ಕೆಳಗೆ ಬಿದ್ದು ಹೋದುದನ್ನು ಮತ್ತೆ ಹೊಸದಾಗಿ ಕಟ್ಟುತ್ತಾನೆ. ಹಾಲು ಒಡೆದು ಹೋದರೆ ಅದನ್ನು ಕಡೆದು ಮಜ್ಜಿಗೆಯನ್ನಾಗಿ ಮಾಡುತ್ತಾನೆ ತುಂಬಾ ಹಳೆಯದನ್ನು ಹಾಳಾಗಲು ಬಿಡುತ್ತಾನೆ.ಹಳತಾದವುಗಳನ್ನು ಹೊಸ ರೂಪಕೊಟ್ಟು ನವೀಕರಿಸುತ್ತಾನೆ. ಮಾನವನ ಬದುಕು ಅವನು ಕಟ್ಟುವ ಮನೆಯಂತಯೇ ನಡೆಯುತ್ತಿರುತ್ತದೆ. ಮನೆಯ ಒಂದು ಭಾಗ ಎಲ್ಲಿಯಾದರೂ ಬೀಳುವಂತಿದ್ದರೆ ಅದಕ್ಕೆ ಆಧಾರ ಕೊಟ್ಟು ಬೀಳದಂತೆ ನಿಲ್ಲಿಸುತ್ತಾನೆ. ತುಂಬಾ ಹಳೆಯ ಮನೆಯಾದರೆ ಅದನ್ನು ಕೆಡವಿ ಹೊಸತನ್ನು ಕಟ್ಟುತ್ತಾನೆ. ತನ್ನ ಬಾಳಿನ ಮನೆಯನ್ನೂ ಮಾನವ ಹೀಗೆಯೇ ಕಟ್ಟಿಕೊಳ್ಳುತ್ತಿರುತ್ತಾನೆ. ಇದೇ ಬಾಳಿನ ಚಿರಧರ್ಮ.