ಗ್ರಾಮೀಣ ಜನರ ಆರೋಗ್ಯ ಹದಗೆಟ್ಟರೆ ಸ್ಥಳೀಯ ಗ್ರಾಪಂಗಳೇ ಹೊಣೆ : ಜಿಪಂ ಸಿಇಒ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಖಡಕ್ ಸೂಚನೆ.
ಟಿ.ತುಂಬಿಗೆರೆಯ ಶಂಕಿತ ವಾಂತಿ-ಭೇದಿ ಪ್ರಕರಣ ಬೆನ್ನೆಲ್ಲೆ ಗಂಭೀರವಾಗಿ ಪರಿಗಣಿಸಿದ ಜಿಪಂ ಅಧಿಕಾರಿಗಳು
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹರಪನಹಳ್ಳಿ.
ಗ್ರಾಮೀಣ ಜನರಿಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಕಡ್ಡಾಯವಾಗಿ ಒದಗಿಸಬೇಕಾದ ಮೂಲ ಸೌಲಭ್ಯಗಳ ಮೂಲಕ ಯಾವುದಾದರೂ ಅವಘಡ ಸಂಭವಿಸಿದರೆ ಅಯಾ ಗ್ರಾಪಂಗಳೇ ನೇರ ಹೊಣೆಯಾಗಿರುತ್ತದೆ ಎಂದು ಜಿಪಂ ಸಿಇಒ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಖಡಕ್ ಎಚ್ಚರಿಕೆ ನೀಡಿದರು.
ತಾಲೂಕಿನ ರಾಗಿಮಸಲವಾಡ ಗ್ರಾ.ಪಂ ವ್ಯಾಪ್ತಿಯ ಟಿ.ತುಂಬಿಗೆರೆ ಗ್ರಾಮದಲ್ಲಿ ಶಂಕಿತ ವಾಂತಿ-ಭೇದಿ ಪ್ರಕರಣಕ್ಕೆಸಂಬಂಧಿಸಿದಂತೆದ ಕಲುಷಿತ ನೀರಿನಿಂದ ಆರೋಗ್ಯದಲ್ಲಿ ಏರುಪೇರು ಉಂಟಾದ ಮನೆಗಳಿಗೆ ಭೇಟಿ ನೀಡಿ ಮಾತನಾಡಿದರು,
ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ ನಂತರ ಗ್ರಾಮದಲ್ಲಿ ಸಂಚರಿಸಿದ ಅವರು ಶುದ್ಧ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಇತರ ಮೂಲ ಸೌಲಭ್ಯಗಳ ಕುರಿತು ಪರಿಶೀಲಿಸಿ, ಜನರ ಕುಂದು-ಕೊರತೆ ಆಲಿಸಿ, ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ತಿಂಗಳೊಳಗೆ ಆರ್‌ಒ ಪ್ಲಾಂಟ್ : ಶಂಕಿತ ವಾಂತಿ-ಭೇದಿ ಪ್ರಕರಣಕ್ಕೆ ಹಿನ್ನಲೆಯಲ್ಲಿ ಗ್ರಾಮದಲ್ಲಿ ವಿವಿಧ ಸೌಲಭ್ಯ ಪರಿಶೀಲಿಸುತ್ತಿದ್ದ ವೇಳೆ ಸಾರ್ವಜನಿಕರು ಸಿಇಒ ಅವರ ಬಳಿ ಬಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಿಸಿ ಚರಂಡಿ, ಸಕಾಲಕ್ಕೆ ಸ್ವಚ್ಛತೆ ಕಾರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸ್ಥಳದಲ್ಲೇ ಪರಿಹರಿಸುವಂತೆ ಒತ್ತಾಯಿಸಿದರು. ಸದ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಂತರ ಒಂದು ತಿಂಗಳೊಳಗೆ ಆರ್‌ಒ ಪ್ಲಾಂಟ್ ಸ್ಥಾಪಿಸಲಾಗುವುದು. ನಂತರ ಮೂಲ ಸೌಲಭ್ಯಗಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆದಷ್ಟು ಶೀಘ್ರ ಕಲ್ಪಿಸುವಂತೆ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದರು.
ಕರೇಕಾನಹಳ್ಳಿಗೆ ಭೇಟಿ : ಮಾಡ್ಲಗೆರೆ ಗ್ರಾಪಂ ವ್ಯಾಪ್ತಿಯ ಕರೇಕಾನಹಳ್ಳಿ ಗ್ರಾಮದಲ್ಲಿ ಶಂಕಿತ ವಾಂತಿ-ಭೇದಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಯಾವುದೇ ಸಂದರ್ಭದಲ್ಲಿ ಏನೇ ತುರ್ತು ಇದ್ದರೂ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.
ವಿವಿಧ ಕಾಲೇಜುಗಳಿಗೆ ಭೇಟಿ : ಹರಪನಹಳ್ಳಿ, ಹಲುವಾಗಲು, ಶಿಂಗ್ರಿಹಳ್ಳಿ, ಲಕ್ಷ್ಮೀಪುರ, ಕಂಚಿಕೆರೆ ಗ್ರಾಮದಲ್ಲಿರುವ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯ ಪರಿಶೀಲಿಸಿದರು. ಇದೇ ವೇಳೆ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಗೊಂಡಿರುವ ಕಾಮಗಾರಿಗಳನ್ನು ಸಿಇಒ ಹಾಗೂ ಉಪಕಾರ್ಯದರ್ಶಿಗಳು ಪರಿಶೀಲಿಸಿದರು.
ಈ ವೇಳೆ ಜಿಪಂನ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಲ್.ಆರ್.ಶಂಕರನಾಯ್ಕ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಷಣ್ಮುಖನಾಯ್ಕ, ಟಿಎಚ್‌ಒ ಪೃಥ್ವಿ, ತಾಪಂ ಇಒ ವೈ.ಎಚ್.ಚಂದ್ರಶೇಖರ್, ನರೇಗಾ ಸಹಾಯಕ ನಿರ್ದೇಶಕ ವೈ.ಎಚ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೀಪ, ಎಇಇ ಕಿರಣ್ ನಾಯ್ಕ, ತೆಲಿಗಿ ಪಿಎಚ್ ಸಿ ವೈದ್ಯ ಎ.ವಿನುತಾ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒ, ತಾಪಂ ಹಾಗೂ ಸಿಬ್ಬಂದಿ ನರೇಗಾ ಸಿಬ್ಬಂದಿ ಇದ್ದರು.
ರಾಗಿಮಸಲವಾಡ ಪಿಡಿಒ ಎಸ್.ಶ್ರೀನಿವಾಸ ಅಮಾನತು
ಟಿ.ತುಂಬಿಗೆರೆ ಗ್ರಾಮದಲ್ಲಿ ಉಂಟಾದ ಶಂಕಿತ ವಾಂತಿ-ಭೇದಿ ಪ್ರಕರಣದಿಂದ ಗ್ರಾಮಸ್ಥರು ಪಿಡಿಒ ಅಮಾನತಿಗೆ ಒತ್ತಾಯಿಸಿದ ಬೆನ್ನೆಲೆ ತಾಪಂನ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಹಾಗೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿವಿಧ ಲೋಪಗಳು ಪ್ರಾಥಮಿಕವಾಗಿ ಕಂಡು ಬಂದಿದ್ದರಿAದ ತಾಪಂನಿಂದ ನೀಡಿದ ವರದಿಯನ್ವಯ ಜಿಪಂ ಸಿಇಒ ಅವರು ಅ.22 ರಂದು ಮಂಗಳವಾರ ರಾಗಿಮಸಲವಾಡ ಪಿಡಿಒ ಎಸ್.ಶ್ರೀನಿವಾಸರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ನಂತರ ದುಗ್ಗಾವತಿ ಪಿಡಿಒ ಮುಕ್ತರ್‌ಅಲಿ ಅವರನ್ನು ರಾಗಿಮಸಲವಾಡ ಗ್ರಾಪಂಗೆ ಪ್ರಭಾರಿಯಾಗಿ ನೇಮಕ ಮಾಡಿ ಆದೇಶಿಸಿದ್ದರಿಂದ ಬುಧವಾರವೇ ಅಧಿಕಾರ ವಹಿಸಿಕೊಂಡಿದ್ದಾರೆ.