ಮಹಿಳಾ ಅರ್ಥಿಕ ಸಬಲೀಕರಣಕ್ಕೆ ಹೊಲಿಗೆ ಯಂತ್ರ ತರಬೇತಿ ಸ್ವಾವಲಂಬಿ ಬದುಕು ಕಟ್ಟಿಕೊಡಲಿದೆ : SLR ಮೆಟಾಲಿಕ್ಸ್ CSR ಹಿರಿಯ ಅಧಿಕಾರಿ ಕೆ.ಎಸ್.ರಾಘವಂಕ ಹೇಳಿಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಹೊಲಿಗೆಯಂತ್ರ ತರಬೇತಿಯ ಪಡೆಯುವುದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಅರ್ಥಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಿಎಸ್ಆರ್ ಹಿರಿಯ ಅಧಿಕಾರಿ ಕೆ.ಎಸ್.ರಾಘವಾಂಕ ಹೇಳಿದರು.
ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಎಸ್ಎಲ್ಆರ್ ಮೆಟಾಲಿಕ್ಸ್ ಸಿಎಸ್ಆರ್ ಯೋಜನೆಯಡಿ ಚೈತನ್ಯ ಗ್ರಾಮೀಣಾಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಹೊಲಿಗೆ ಯಂತ್ರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣವಾಗಲು ಹೊಲಿಗೆ ತರಬೇತಿ ಉತ್ತಮವಾಗಿದೆ. ಈ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಸ್ವಂತ ಉದ್ಯೋಗ ಆರಂಭಿಸಲು ಅವಕಾಶ ನೀಡುತ್ತದೆ. ದೇಶದ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದಲೇ ಸಾಧ್ಯ ಎಂದರು.
ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಭೀಮರಾಜ್ ಪ್ರಾಸ್ತಾವಿಕ ಮಾತನಾಡಿ, ಎಸ್ಎಲ್ಆರ್ ಮೆಟಾಲಿಕ್ಸ್ ಕಂಪನಿಯು ಸಮುದಾಯದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹಿಸಿ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ತರಬೇತಿ ಮತ್ತು ವಿದ್ಯಾವಂತ ಯುವಜನತೆಗೆ ಕಂಪ್ಯೂಟರ್ ತರಬೇತಿ ನೀಡಲು ಹಣಕಾಸು ನೆರವು ನೀಡುತ್ತಿರುವುದು ಶ್ಲಾಘನೀಯ. ಮಹಿಳೆಯರು, ವಿದ್ಯಾವಂತ ಯುವಜನರು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ನಿರುದ್ಯೋಗ ಸಮಸ್ಯೆಯಾಗದಂತೆ ಕಂಪನಿಯಿಂದ ಪ್ರೋತ್ಸಾಹಿಸುತ್ತಿರುವುದು ಈ ಭಾಗದ ಬಡಜನರಿಗೆ ಅನುಕೂಲವಾಗಲಿದೆ ಎಂದರು.
ಎಸ್ಎಲ್ಆರ್ ಮೆಟಾಲಿಕ್ಸ್ ಸಿಬ್ಬಂದಿ ಪೂಜಾನಾಯ್ಡು ಮಾತನಾಡಿ, ಇಂತಹ ತರಬೇತಿಗಳಿಂದ ಮಹಿಳೆಯರು ಸ್ವಾಭಿಮಾನದ ಬದುಕು ನಿರ್ವಹಿಸಲು ಅನುಕೂಲವಾಗಲಿದೆ. ಮನೆಯ ಯಜಮಾನನಿಗೆ ಆರ್ಥಿಕವಾಗಿ ಕೈಜೋಡಿಸುವ ಮೂಲಕ ಕುಟುಂಬ ನಿರ್ವಹಣೆಗೆ ಸಹಕಾರ ನೀಡದಂತಾಗಲಿದೆ. ಸಾರ್ವಜನಿಕರ ಸಹಕಾರದೊಂದಿಗೆ ಎಸ್ಎಲ್ಆರ್ ಕಂಪನಿಯು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ ಎಂದರು.
ಎಸ್ಎಲ್ಆರ್ ಮೆಟಾಲಿಕ್ಸ್ ಸಿಎಸ್ಆರ್ ಅಧಿಕಾರಿ ಕೆ.ಮಲ್ಲಿಕಾರ್ಜುನ ಮಾತನಾಡಿ, ಉಪನಾಯಕನಹಳ್ಳಿ ಗ್ರಾಮದಲ್ಲಿ ಹೊಲಿಗೆ ಯಂತ್ರ ತರಬೇತಿಗೆ ಮೊದಲ ಬ್ಯಾಚಿನಲ್ಲಿ 40 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಆರು ತಿಂಗಳ ಕಾಲ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಹೊಲಿಗೆ ಯಂತ್ರ ತರಬೇತಿ ನೀಡಿ ಜತೆಗೆ ತರಬೇತಿ ಪಡೆದ 40 ಜನ ಮಹಿಳೆಯರಿಗೆ ಉಚಿತವಾಗಿ ಒಂದೊಂದು ಹೊಲಿಗೆ ಯಂತ್ರ ಮತ್ತು ಪ್ರಮಾಣ ಪತ್ರ ಸಿಎಸ್ಆರ್ ಯೋಜನೆಯಡಿಯಲ್ಲಿ ನೀಡಲಾಗುತ್ತದೆ ಎಂದರು.
“ಎಸ್ಎಲ್ಆರ್ ಕಂಪನಿ ಮತ್ತು ಚೈತನ್ಯ ಸಂಸ್ಥೆಯ ತರಬೇತಿಯಿಂದಾಗಿ ವೈಯಕ್ತಿಕವಾಗಿ ತುಂಬಾ ಅನುಕೂಲವಾಗಲಿದೆ. ಇಂತಹ ತರಬೇತಿ ಕಲಿಯಲು ಹೊರಗಡೆ ತಿಂಗಳಿಗೆ ಕನಿಷ್ಟ ಒಂದು ಸಾವಿರ ರೂಗಳ ಶುಲ್ಕ ಪಾವತಿಸಬೇಕಿತ್ತು. ಆದರೆ ನಾವಿದ್ದಲ್ಲಿಗೆ ಬಂದು 6 ತಿಂಗಳು ಉಚಿತ ತರಬೇತಿ ನೀಡುವುದಲ್ಲದೇ, ಉಚಿತ ಯಂತ್ರ ನೀಡುತ್ತಿರುವುದು ನಮ್ಮ ಕೈಬಲಪಡಿಸಿದಂತಾಗಿದೆ.”
– ಗಂಗಮ್ಮ, ಕಲಿಕಾರ್ತಿ.
ಕಂಪನಿಯ ಸಿಬ್ಬಂದಿಗಳಾದ ಕೆ.ಮಲ್ಲಿಕಾರ್ಜುನ, ಮಾರುತಿ ಘೋಷಿ, ಶಿವಕುಮಾರ ತಲವಾರು, ಚೈತನ್ಯ ಸಂಸ್ಥೆಯ ಸಿಬ್ಬಂದಿ ಸುವರ್ಣಮ್ಮ, ಮುಖ್ಯಗುರು ಬಿ.ರಾಮಪ್ಪ, ಗ್ರಾಪಂ ಸದಸ್ಯರಾದ ಜಿ.ಶಿಲ್ಪಾ ಪರಶುರಾಮ, ನಕ್ರಾಳ್ ಗೋಣೆಪ್ಪ, ರೆಪ್ಪಿ ಹುಲಿಗೆಮ್ಮ ಸಿದ್ದಪ್ಪ, ಹನುಮಂತಪ್ಪ ಸೇರಿದಂತೆ ಇತರರಿದ್ದರು.