ಯಾವುದು ಮೊದಲು ತಿದ್ದಬೇಕು ?
ತಿದ್ದಿಕೊಳೊ ನಿನ್ನ ನೀಂ ; ಜಗವತಿದ್ದುವುದಿರಲಿ ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು | ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ ಸ್ಪರ್ಧಿಯೆ ತ್ರಿ ವಿಕ್ರಮಗೆ ? – ಮಂಕುತಿಮ್ಮ ||
ನಿನ್ನನ್ನು ಮೊದಲು ನೀನು ತಿದ್ದಿಕೊ. ಜಗತ್ತನ್ನು ತಿದ್ದುವುದು ಇರಲಿ. ಈ ತಿದ್ದುವಿಕೆಗೊಂದು ಮಿತಿ ಇದೆ. ಎಂಬುದನ್ನು ಮರೆಯಬೇಡ. ಗರಡಿ ಮನೆಯ ವ್ಯಾಯಾಮದಿಂದ ನೀನು ಒಂದು ಬೆರಳಿನಷ್ಟು ಉದ್ದ ಮಾತ್ರ ಬೆಳೆಯಬಹುದು. ಆದರೆ ನೀನು ವಾಮನನಿಗೆ ಸ್ಪರ್ಧಿಯಾಗಲು ಸಾಧ್ಯವೇ ?
ಲೋಕದ ಜನ ಸದಾ ಇತರರನ್ನು ತಿದ್ದಲು ಪ್ರಯತ್ನಿಸುತ್ತಿರುತ್ತಾರೆ. ಡಿವಿಜಿಯವರು ಇಲ್ಲಿ ‘ನಿನ್ನನ್ನು ನೀನು ಮೊದಲು ತಿದ್ದಿಕೋ, ಲೋಕವನ್ನು ತಿದ್ದುವ ವಿಚಾರ ಹಾಗಿರಲಿ’ ಎಂದು ಸೂಚಿಸುತ್ತಾರೆ. ಪರೋಪದೇಶ ವಿಚಾರದಲ್ಲಿ ಎಲ್ಲರೂ ಪಾಂಡಿತ್ಯ ಪ್ರದರ್ಶನವನ್ನು ಮಾಡುತ್ತಾರೆ. ತಮ್ಮ ಬಗ್ಗೆ, ತಮ್ಮ ದೋಷಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಪ್ರತಿಯೊಬ್ಬನೂ ತನ್ನನ್ನು ತಿದ್ದಿಕೊಂಡರೆ ಸಾಕು. ಜಗತ್ತು ಬದಲಾಗಿ ಬಿಡುತ್ತದೆ. ಬದಲಾವಣೆಗಳು ವ್ಯಕ್ತಿ ಕೇಂದ್ರಿತವಾಗಿದ್ದರೆ ಸಮಾಜದ ಪರಿವರ್ತನೆ ಸುಲಭ. ತಮ್ಮ ದೋಷವನ್ನು ಮರೆಮಾಚಿ ಪ್ರತಿಯೊಬ್ಬನೂ ಇತರರನ್ನು ತಿದ್ದಹೊರಟರೆ ಯಾರು ತಿದ್ದಿಕೊಳ್ಳಲಾರರು. ಈ ತಿದ್ದಿವಿಕೆಗೊಂದು ಮಿತಿಯಿರುತ್ತದೆ. ಅದನ್ನು ಮರೆಯಬೇಡ. ಗರಡಿ ಮನೆಗೆ ಹೋಗಿ ಬಹಳ ವರ್ಷ ವ್ಯಾಯಾಮ ಮಾಡಿದರೂ ಅದರ ಫಲವಾಗಿ ಒಂದು ಬೆರಳಿನಷ್ಟು ಉದ್ದ ಮಾತ್ರ ಬೆಳೆಯಬಹುದು. ವಾಮನ ಎತ್ತರದಲ್ಲಿ ಕುಬ್ಜ ಆದರೆ ಬಲಿಯನ್ನು ನಿಗ್ರಹಿಸುವಾಗ ಅವನ ಪಾದಗಳು ಬೃಹದಾಕಾರದಲ್ಲಿ ಬೆಳೆದವು. ಎಷ್ಟೇ ನೀನು ಶಾರೀರಿಕವಾಗಿ ತಿದ್ದಿಕೊಳ್ಳಬಹುದು. ಆದರೆ ಆ ವಾಮನನಿಗೆ ಸ್ಪರ್ಧೆಯೊಡ್ಡಲು ಸಾಧ್ಯವೇ? ನಿನ್ನ ಮಿತಿ ಅರಿತು ವ್ಯವಹರಿಸು.