ಸ್ವತಂತ್ರ ಸುಖ ಎಂತಿರಬೇಕು ?
ಎಸಳಿನಡಿ ಗಿಡದ ಬಿಗಿ, ಮೇಲೆ ಗಾಳಿಯ ಸರಸ ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ |
ಕುಶಲ ಸೌರಭವ ನಿರ್ಯತ್ನ ಸ್ವತಂತ್ರ ದಿಂ ಪಸರಿಪಾ ನಯ ಸುಖವೊ – ಮಂಕುತಿಮ್ಮ ||
ದಳದ ಬುಡದಲ್ಲಿ ಗಿಡದ ಹಿಡಿತವಿದ್ದು, ಮೇಲೆ ಗಾಳಿಯ ಸರಸವಿರುತ್ತದೆ. ಆ ಹಿಡಿತ ಮುಕ್ತತೆಗಳಿಂದಲೇ ಹೂವಿಗೆ ಕ್ಷೇಮ. ಆಗ ಪ್ರಯತ್ನವಿಲ್ಲದೇ ಸ್ವತಂತ್ರವಾಗಿ, ಚಾತುರ್ಯದಿಂದ ಅದರ ಸುವಾಸನೆ ಹರಡಿತ್ತದೆ. ಈ ರೀತಿಯೇ ಸುಖವನ್ನು ಕೊಡುತ್ತದೆ.
ಮಾನ್ಯ ಡಿವಿಜಿಯವರು ಇಲ್ಲಿ ಹೂವಿನ ಉದಾಹರಣೆಯೊಂದಿಗೆ ಬದುಕಿನಲ್ಲಿ ಬಂಧನ, ಸ್ವಾತಂತ್ರ್ಯ ಎರಡರ ಅಗತ್ಯವೂ ಇರುತ್ತದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಹೂವಿನ ಎಸಳಿಗೆ ಅದರ ಮೂಲದಲ್ಲಿ ಗಿಡದ ಬಂಧನವಿರುತ್ತದೆ. ಮೇಲೆ ಮುಕ್ತವಾಗಿರುತ್ತದೆ. ಗಾಳಿ ಆ ದಳಗಳ ಮೇಲೆ ಬೀಸಿದಾಗ ಅದರ ಸುವಾಸನೆ ಎಲ್ಲೆಡೆ ಹರಡುತ್ತದೆ. ಆ ಎಸಳುಗಳಿಗೆ ಗಿಡದ ಬಿಗಿತ ಇಲ್ಲದಿರುತ್ತಿದ್ದರೆ, ಅವು ಗಾಳಿಯ ಜೊತೆಯಲ್ಲಿಯೇ ಹಾರಿ ಎಲ್ಲಿಯೋ ಬಿದ್ದುಬಿಡುತ್ತಿದ್ದವು. ಹೀಗೆ ಒಂದು ಕಡೆ ಬಿಗಿತ ಇನ್ನೊಂದು ಕಡೆ ಬಿಡುತ್ತೆ ಇವೆರಡು ಇದ್ದಾಗ ಗಾಳಿಯ ಸಹವಾಸದಿಂದ ಸುವಾಸನೆ ಅನಾಯಾಸವಾಗಿ, ಸ್ವತಂತ್ರವಾಗಿ ಎಲ್ಲೆಡೆ ಹರಡುತ್ತದೆ. ಬದುಕಿನಲ್ಲಿ ಅಂತಹ ಕುಶಲವಾದ ನಾಜೂಕಿನ ನಡೆ ಸುಖವನ್ನು ನೀಡುತ್ತದೆ. ಅತಿಯಾದ ಬಂಧನ ಸುಖವನ್ನು ನೀಡಲಾರದು. ಅತಿಯಾದ ಸ್ವಾತಂತ್ರ್ಯವೂ ಸುಖಕರವಾಗಲಾರದು. ಗಾಳಿಪಟಕ್ಕೆ ಒಂದೆಡೆ ಸೂತ್ರದ ಬಂಧನವಿರುತ್ತದೆ. ಇನ್ನೊಂದು ಕಡೆ ಗಾಳಿಯ ಸ್ಪಂದನವಿರುತ್ತದೆ. ಗಾಳಿಪಟ ಆಗಸದಲ್ಲಿ ಮಿಂಚುತ್ತದೆ. ಹುಟ್ಟು ಸಾವುಗಳಿಂದ ಕೂಡಿದ ನಮ್ಮ ಬದುಕೂ ಅಂತೆಯೇ.