ರೈತರ ಜಮೀನಿಗೆ ನೀರು ಹರಿಸಲು ಶೀಘ್ರದಲ್ಲೇ ಚಿಲವಾರು ಬಂಡಿ ಏತ ನೀರಾವರಿ ಯೋಜನೆ ಪೂರ್ಣ ಶಾಸಕ ನೇಮಿರಾಜ ನಾಯ್ಕ ಹೇಳಿಕೆ.
ಕಡಲಬಾಳುನಲ್ಲಿ ಲಿಂ.ಶಿವಶಾಂತವೀರ ಮಹಾಸ್ವಾಮಿಗಳ 102 ನೇ ಪುಣ್ಯಾರಾಧನೆ ಸಂಪನ್ನ, ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 15 ಜೋಡಿಗಳು.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಹೆದ್ದಾರಿಗಳು ಸೇರಿದಂತೆ ಗ್ರಾಮೀಣ ರಸ್ತೆಗಳು ತುಂಬಾ ಹದಗೆಟ್ಟಿವೆ. ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡದಿರುವುದು ತುಂಬಾ ಬೇಸರ ಮೂಡಿಸಿದೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಲಿಂ.ಶಿವಶಾಂತವೀರ ಮಹಾಸ್ವಾಮಿಗಳ 102 ನೇ ಪುಣ್ಯಾರಾಧನೆ ನಿಮಿತ್ತ ಏರ್ಡಿಸಿದ್ದ ಧಾರ್ಮಿಕ ಗೋಷ್ಠಿ ಮತ್ತು ರಥೋತ್ಸವ ಹಾಗೂ ಉಚಿತ ಸಾಮಾಹಿಕ ವಿವಾಹ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಧಾರ್ಮಿಕ, ಆಧ್ಯಾತ್ಮಿಕವಾಗಿ ಶ್ರೀಮಂತಿಕೆ ಹೊಂದಿದೆ. ಶ್ರೀಮಠಗಳು, ಮಠಾಧೀಶರ ಪ್ರಭಾವ ಜನರ ಮೇಲಿದೆ. ಧಾರ್ಮಿಕ ಐಕ್ಯತೆಗೆ ಕಡಲಬಾಳು ಗ್ರಾಮ ಮಾದರಿ. ಶ್ರೀಗವಿಮಠದ ಕಾರ್ಯಕ್ರಮಕ್ಕೆ ಜಾತ್ಯಾತೀತ, ಪಕ್ಷಾತೀತಾವಾಗಿ ಒಗ್ಗಟ್ಟಿನಿಂದ ಅದ್ದೂರಿ ಆಚರಣೆಗೆ ಮತ್ತು ಬಡವರ ಕಲ್ಯಾಣಕ್ಕಾಗಿ ಸಾಮೂಹಿಕ ವಿವಾಹಗಳನ್ನು ಆಚರಿಸುತ್ತ ಬಂದಿರುವುದು ಶ್ಲಾಘನೀಯ. ಇದೇ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಮಠದ ಕಾಯಕ ಭವನ ಉದ್ಘಾಟನೆ ನೇರವೇರಿಸುವುದಾಗಿ ಮಾತು ನೀಡಿದ್ದೇ, ಮಾತಿನಂತೆ ಸುಸಜ್ಜಿತವಾದ ಕಾಯಕ ಭವನ ಇಂದು ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಬೇಡಿಕೆಯಂತೆ ಕಾಪೌಂಡ್, ಅಡುಗೆ ಕೋಣೆ, ಸಭಾಂಗಣ, ಮೇಲಂತಸ್ತು ಅಭಿವೃದ್ಧಿಯನ್ನು ನನ್ನ ಅವಧಿಯೊಳಗೆ ಪೂರ್ಣಗೊಳಿಸುವೆ ಎಂದು ಭರವಸೆ ನೀಡಿದರು.
ವಿವಿಧ ಯೋಜನೆಗಳಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಆದರೆ ರಸ್ತೆಗಳ ಅಭಿವೃದ್ಧಿಗೆ ಮಾತ್ರ ರಾಜ್ಯ ಸರ್ಕಾರವೇ ಅನುದಾನ ನೀಡಬೇಕಿದೆ. ರಾಜ್ಯದ ಎಲ್ಲಾ ಶಾಸಕರು ಸರ್ಕಾರಕ್ಕೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಒತ್ತಾಯಿಸಲಾಗಿದೆ. ರೈತರಿಗೆ ಪ್ರಮುಖವಾಗಿ ನೀರಾವರಿಗೆ ಆದ್ಯತೆ ನೀಡಿ ಚಿಲವಾರ ಬಂಡಿ ಯೋಜನೆಯನ್ನು ಶೀಘ್ರ ಚಾಲನೆ ನೀಡಿ ರೈತರ ಜಮೀನಿಗೆ ನೀರು ಹರಿಸುವ ಕಾರ್ಯ ಮಾಡಲಾಗುತ್ತದೆ. ಕೇಂದ್ರ ರೈಲ್ವೇ ಸಚಿವರೊಂದಿಗೆ ಮಾತನಾಡಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಮರಿಯಮ್ಮನಹಳ್ಳಿಯಲ್ಲಿ ಅಮೃತ್ ಭಾರತ್ ಯೋಜನೆಯಡಿ ಗುಣಮಟ್ಟದ ರೈಲು ನಿಲ್ದಾಣ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಹಳ್ಳಿಗೆ ಕನಿಷ್ಟ 50 ಲಕ್ಷ ರೂ ಅನುದಾನ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾಲದ ಹೊರೆ ತಗ್ಗಿಸಲು ಸಾಮೂಹಿಕ ಕಾರ್ಯಕ್ರಮ ಶ್ರೀಮಠದಿಂದ ಆಯೋಜಿಸಿರುವುದು ಶ್ಲಾಘನೀಯ. ನವದಂಪತಿಗಳಿಗೆ ದಾಂಪತ್ಯ ಜೀವನ ಸುಖವಾಗಲೀ, ತಂದೆ, ತಾಯಿಯರಂತೆ ಅತ್ತೆ, ಮಾವಂದಿರನ್ನು ಗೌರವಿಸಿ, ಪೂರ್ವಜರ ಸಂಪ್ರದಾಯಗಳನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು.
ಮುಖಂಡ ಬ್ಯಾಟಿ ನಾಗರಾಜ್ ಮಾತನಾಡಿ, ಸುಮಾರು ಹತ್ತ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಯಕ ಭವನ ಉದ್ಘಾಟನೆಗೊಂಡಿರುವುದು ಇಡೀ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಶ್ರೀಮಠದ ಆವರಣದಲ್ಲಿ ಗವಿಸಿದ್ದೇಶ್ವರ ಶಿಲಾಮಂಟಪ, ಸುಸಜ್ಜಿತ ಸಭಾಂಗಣ, ಅಡುಗೆ ಕೋಣೆ, ಮೇಲಂತಸ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕೆಂದು ಶಾಸಕರಿಗೆ ಬೇಡಿಕೆಯನ್ನಿಟ್ಟರು.
ಕಾರ್ಯಕ್ರಮದಲ್ಲಿ ಹಿರೇಹಡಗಲಿ ಹಿರಿಶಿವಶಾಂತವೀರ ಸ್ವಾಮೀಜಿ, ಡಾ.ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಉಪಾಧ್ಯಕ್ಷೆ ಅಂಬಿಕಾ ದೇವೆಂದ್ರಪ್ಪ, ಕಡಲಬಾಳು ಗ್ರಾಪಂ ಅಧ್ಯಕ್ಷೆ ಲತಾ ರಾಜಕುಮಾರ್, ಉಪಾಧ್ಯಕ್ಷೆ ಶಾಂತಮ್ಮ ನಾಗರಾಜ್, ಗ್ರಾಪಂ ಪಿಡಿಒ ಅಂಗಡಿ ಸುಜಾತ, ಪುರಸಭೆ ನಾಮನಿರ್ದೇಶಿತ ಸದಸ್ಯ ಬಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ಅನಿಲ್ ಕುಮಾರ್ ಜಾಣಾ, ಪ್ರಮುಖರಾದ ಮಂಜುನಾಥ್ ಗೌಡ್ರು, ಆರ್.ವೆಂಕಟೇಶ, ಓಂಟಿಗೋಡಿ ವಿರೂಪಾಕ್ಷ, ಒಂಟಿಗೋಡಿ ವೀರೇಶ್, ಎ.ಎಂ.ಕೊಟ್ರೇಶ್, ಎ.ಎಂ.ನಾಗರಾಜ, ಎ.ಎಂ.ಗಂಗಾಧರ, ಟಿ.ಎಂ.ಶರಣಯ್ಯ, ಮುಖ್ಯಗುರು ಮಂಜುನಾಥ್, ಬ್ಯಾಟಿ ನಾಗರಾಜ್, ಶಾಂತವೀರಸ್ವಾಮಿ, ಮಾಗಳದ ನಿಂಗಪ್ಪ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ನಾಣ್ಯಾಪುರ ಕೃಷ್ಣಮೂರ್ತಿ, ಬಿ.ಜಿ.ಬಡಿಗೇರ್, ಸಿದ್ದರಾಜು, ಹನಸಿ ಸಿದ್ದೇಶ್, ಎಇಇ ಜಯನಾಯ್ಕ, ಪಿಎಸ್ಐ ಗುರುಚಂದ್ರ ಇದ್ದರು. ವಿ.ಎಂ.ಗವಿಸಿದ್ದೇಶ್ ಕಾರ್ಯಕ್ರಮ ನಿರ್ವಹಿಸಿದರು.