ಯಾವುದು ಜಾಣತನ?
ಹುಲಿಯ ಕೆಣಕುವುದು ಹುಲಿ ; ಕಪಿಯನಣಕಿಪುದು ಕಪಿ ಹುಲಿಕಪಿಗಳವಿತಿರದ ನರಜಂತುವೆಲ್ಲಿ ? ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು ಕುಲುಕದಿರು ಬಾಲವನ – ಮಂಕುತಿಮ್ಮ ||
ಹುಲಿಯನ್ನು ಹುಲಿ ಕೆಣಕುತ್ತದೆ. ಕಪಿ, ಕಪಿಯನ್ನು ಅಣಕಿಸುತ್ತದೆ. ಹುಲಿಕಪಿಗಳು ಅಡಗಿಕೊಂಡಿರದ ನರಪ್ರಾಣಿ ಎಲ್ಲಿ? ಮಲಗಿದ್ದ ಪ್ರಾಣಿಯನ್ನು ಹಾಗೇ ಮಲಗಲು ಬಿಡುವುದೇ ಜಾಣತನ. ಅದರ ಬಾಲವನ್ನು ಕುಲುಕಿ ಕೆಣಕಬೇಡ.
ಹುಲಿಯನ್ನು ಕೆಣಕುವುದಕ್ಕೆ ಹುಲಿಯೇ ಸರಿ. ಬೇರೊಂದು ಪ್ರಾಣಿ ಅದನ್ನು ಕೆಣಕಲಾರದು. ಹಾಗೆಯೇ ಕೋತಿಯನ್ನು ಅಣಕಿಸುವುದಕ್ಕೆ ಕೋತಿಯೇ ಆಗಬೇಕು. ಅಣಕದಲ್ಲಿ ಕೋತಿಯಷ್ಟು ನೈಪುಣ್ಯ ಪಡೆದ ಪ್ರಾಣಿ ಬೇರೊಂದಿಲ್ಲ. ಅದರೆ ಮನುಷ್ಯನಲ್ಲಿ ಹುಲಿ ಕಪಿಗಳೆರಡು ಅವಿತುಕೊಂಡಿವೆ. ಏಕೆಂದರೆ ಹುಲಿಯಂತೆ ಇತರರನ್ನು ಕೆಣಕುವ ಬುದ್ಧಿಯಂತೆ ಇನ್ನೊಬ್ಬರನ್ನು ಅಣಕಿಸುವ ಸ್ವಭಾವವೂ ಇದೆ. ಆದರೆ ಕೆಣಕುವುದಾಗಲಿ, ಅಣಕಿಸುವುದಾಗಲಿ ಒಳ್ಳೆಯ ಸ್ವಭಾವವಲ್ಲ. ಅದು ಕೆಲವೊಮ್ಮೆ ತಿರುಗುಬಾಣವಾಗಿ ಚುಚ್ಚುವ ಸಂಭವವೂ ಇರುತ್ತದೆ. ಆದ್ದರಿಂದ ಮಲಗಿ ನಿದ್ರಿಸುತ್ತಿರುವ ಮೃಗವನ್ನು ಹಾಗೆಯೇ ಇರಲು ಬಿಡುವುದು ಜಾಣತನ. ಹಾಗೆ ಮಾಡದೆ ಅದರ ಬಾಲವನ್ನು ಕುಲಕಲು ಹೋದರೆ ಅಪಾಯವನ್ನು ಬರಮಾಡಿಕೊಂಡಂತೆಯೇ ಸರಿ.