ಜಿಲ್ಲಾ ಹೆದ್ದಾರಿಯಲ್ಲಿ ಭತ್ತ ನಾಟಿ ಮಾಡಿ ರಾಜ್ಯ ರೈತ ಸಂಘಟನೆ ಆಕ್ರೋಶ ; ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಗೆ ಛೀಮಾರಿ : ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ನೇತೃತ್ವದಲ್ಲಿ ಪ್ರತಿಭಟನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ತಂಬ್ರಹಳ್ಳಿಯಿಂದ ಬಸರುಕೋಡು ಮಾರ್ಗದ ಕೃಷ್ಣಾಪುರ ಗ್ರಾಮದಲ್ಲಿ ಹದಗೆಟ್ಟ ಜಿಲ್ಲಾ ಹೆದ್ದಾರಿ ರಸ್ತೆಯ ಸ್ಥಿತಿ ಕಂಡು ನಡುರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಎಚ್ಚರಿಸಲು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೃಷ್ಣಾಪುರ ಗ್ರಾಮದಲ್ಲಿ ಗ್ರಾಮ ಘಟಕ ರಚನೆಗೆ ಹೋದ ವೇಳೆ ತಂಬ್ರಹಳ್ಳಿ ಬಸರಕೋಡು ಮಾರ್ಗದ ರಸ್ತೆ ಕೆಸರು ಗದ್ದೆಯಂತಾಗಿದೆ. ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ಥರವಾಗಿದೆ. ನೀರು ನಿಂತು ಹಳ್ಳದಂತಾಗಿದೆ. ಸ್ಥಳೀಯ ಗ್ರಾಮಸ್ಥರು ಅನೇಕ ಬಾರಿ ಗ್ರಾಪಂ ಪಿಡಿಓ ಸೇರಿ ಪಿಡಬ್ಲೂಡಿ ಅಧಿಕಾರ ಗಮನಕ್ಕೆ ತಂದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, “ಕೃಷ್ಣಾಪುರ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಪ್ರಾಣಾಹಾನಿಗಳು ಸಂಭವಿಸುವ ಮುನ್ನಾ ರಸ್ತೆ ದುರಸ್ಥಿ ಕಾರ್ಯಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮವಹಿಸಬೇಕು. ರಸ್ತೆ ತುಂಬೆಲ್ಲಾ ನೀರು ನಿಂತು ಹಳ್ಳದಂತಾಗಿದೆ. ನೀರಿನಲ್ಲಿ ಸೊಳ್ಳೆಗಳ ವೃದ್ಧಿಯಾಗಿ ಇಡೀ ಗ್ರಾಮದ ಜನತೆಗೆ ಡೆಂಗ್ಯೂ ಸೇರಿ ಇತರೆ ಸಮಸ್ಯೆಗಳಿಗೆ ಮೂಲವಾಗಲಿದೆ. ಗ್ರಾಮೀಣ ಸಮಸ್ಯೆಗಳ ಬಗ್ಗೆ ನಿರ್ಲಕ್ಯ ಸಲ್ಲದು. ರಾಜ್ಯ ರೈತ ಸಂಘ ಕಣ್ಣಿಗೆ ಕಾಣುವ ಸಮಸ್ಯೆಗಳ ವಿರುದ್ಧ ಪ್ರತಿಭಟನೆಗೆ ಮೊದಲ ಆದ್ಯತೆ ನೀಡಲಿದೆ. ಎಚ್ಚರಗೊಳ್ಳದಿದ್ದರೇ ರೈತ ಸಂಘದಿಂದ ಬೃಹತ್ ಪ್ರತಿಭಟನೆಗೆ ಸಜ್ಜಾಗಲಿದೆ ಎಂದರು.
ತಾಲೂಕು ಪ್ರ.ಕಾರ್ಯದರ್ಶಿ ರವಿಕುಮಾರ ತಂಬ್ರಹಳ್ಳಿ ಪ್ರತಿಕ್ರಿಯಿಸಿ, ಇಡೀ ತಾಲೂಕಿನಲ್ಲಿ ಎಲ್ಲಾ ಗ್ರಾಮೀಣ ರಸ್ತೆಗಳು ಕಿತ್ತುಹೋಗಿವೆ. ಕನಿಷ್ಟ ನಿರ್ವಹಣೆಗೆ ಆದ್ಯತೆ ನೀಡದೆ ಬಹುತೇಕ ಅಪಘಾತಗಳು ಸಂಭವಿಸಿ ಪ್ರಾಣಕಳೆದುಕೊಂಡಿದ್ದಾರೆ. ಕೂಡಲೇ ಶಾಸಕರು, ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ತಾಕೀತು ಮಾಡಿದ್ದಾರೆ.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ರಾಜ್ಯ ವಿಭಾಗೀಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ, ಗೌರವಾಧ್ಯಕ್ಷ ಹಲಗೇರಿ ಮಹೇಶ್, ಪ್ರಮುಖರಾದ ಓಪ್ಪೇತ್ತೇಶ್ ಬಣಕಾರ, ನಾಗೇಂದ್ರಪ್ಪ, ನಾಗಲಾಪುರದ ವೀರಣ್ಣ, ವಸಂತ ಕುಮಾರ, ಬಸವರಾಜ ಶೀಗೇನಹಳ್ಳಿ, ಬಸವನಗೌಡ್ರು, ವಿವಿಧ ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.