ಮನುಷ್ಯನ ವಿವೇಕ ಎಂಥದು?
ನರವಿವೇಕವದೇನು ಬರಿಯ ಮಳೆ ನೀರಲ್ಲ ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ |
ಧರೆಯ ರಸವಾಸನೆಗಳಾಗಸದ ನಿರ್ಮಲದ ವರವ ಕದಡಾಗಿಪುವು – ಮಂಕುತಿಮ್ಮ ||
ಮನುಷ್ಯನ ವಿವೇಕ ಕೇವಲ ಮಳೆಯ ನೀರಲ್ಲ. ಅದು ಕೆರೆಯ ನೀರು ಹಾಗೂ ಊರಿನ ಜನರ ಮೈಯ ಸೋಂಕುಗಳ ಮಿಶ್ರಣವಾಗಿರುತ್ತದೆ. ಭೂಮಿಯ ರಸದ ವಾಸನೆಗಳು ಅಕಾಶದ ನಿರ್ಮಲವಾದ ವರವನ್ನು ಕದಡಿ ಬಿಡುತ್ತವೆ.
ಮನುಷ್ಯನ ವಿವೇಕ ಮಳೆಯ ನೀರಿನಂತೆ ಒಂದೇ ತೆರನಾಗಿ ಶುದ್ಧವಾಗಿರುವುದಿಲ್ಲ. ಅದರಲ್ಲಿ ನಾನಾ ಬೆರಕೆಗಳು ಸೇರಿರುತ್ತವೆ. ಮಳೆಯ ನೀರಿನ ಜೊತೆಗೆ ಕೆರೆಯ ನೀರೂ ಸೇರಿರುತ್ತದೆ. ಊರ ಜನರು ಉಪಯೋಗಿಸಿದ ನೀರಿನ ಸೋಂಕೂ ಇರುತ್ತದೆ. ಮಳೆಯ ನೀರು ಆಗಸದಿಂದ ಸುರಿಯುವಾಗ ನಿರ್ಮಲವಾಗಿರುತ್ತದೆ. ಆದರೆ ಅದು ಭೂಮಿಗೆ ಸೇರಿದೊಡನೆ ಭೂಮಿಯ ರಸವಾಸನೆಗಳನ್ನು ಪಡೆದುಕೊಳ್ಳುತ್ತದೆ. ಒಂದೇ ನೀರು ಸಿಹಿಯೂ ಆಗಿರುತ್ತದೆ. ಉಪ್ಪೂ ಆಗುತ್ತದೆ. ಅದರಂತೆಯೇ ಮನುಷ್ಯನ ವಿವೇಕದಲ್ಲಿ ನಾನಾ ಅಂಶಗಳು ಸೇರಿಕೊಂಡಿರುತ್ತವೆ. ಈ ಅಂಶಗಳು ಮನುಷ್ಯನ ವಿವೇಕವನ್ನು ಕದಡಿ ಬಿಡುತ್ತವೆ. ಮಳೆಯ ನೀರು ಭೂಮಿಗೆ ಸೇರಿ ಬಗ್ಗಡವಾದಂತೆ. ಆದ್ದರಿಂದ ನರನ ವಿವೇಕ ಯಾವಾಗಲೂ ಶುದ್ಧವಾಗಿರುತ್ತದೆಯೆಂದು ಹೇಳುವಂತಿಲ್ಲ.