ಮಾನಸಿಕ ಒತ್ತಡ ನಿರ್ವಹಣೆಗೆ ಸಮತೋಲನ ಜೀವನ ಶೈಲಿ ಅತ್ಯಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಧುಸೂದನ್ ಹೇಳಿಕೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಅಧುನಿಕ ಜಗತ್ತಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗದೇ ಜೀವನ ನಿರ್ವಹಣೆಗೆ ಆದ್ಯತೆ ನೀಡಲು ಸಮತೋಲನ ಜೀವನ ಪದ್ದತಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಧುಸೂಧನ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನುಗಳ ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಆಸ್ಪತ್ರೆ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒತ್ತಡದ ಜೀವನ ಶೈಲಿಯಿಂದಲೇ ಮನುಷ್ಯ ಅನಾರೋಗ್ಯ ಪೀಡಿತನಾಗುತ್ತಿದ್ದಾನೆ. ಮಿತಾಹಾರ, ಯೋಗ, ವ್ಯಾಯಾಮ ಸೇರಿದಂತೆ ಧ್ಯಾನದಿಂದ ಮಾನಸಿಕ ಆರೋಗ್ಯವನ್ನು ಪಡೆಯಬಹುದು. ಸಮತೋಲನ ಅಹಾರ ಪದ್ದತಿ, ಜೀವನ ಶೈಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಪ್ರವೀಣ್ ಮಾತನಾಡಿ, ಮಾನಸಿಕ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ನಿತ್ಯ ಯೋಗಾಭ್ಯಾಸ, ಬೆಳಗಿನ ಜಾವ ವಾಕಿಂಗ್ ಮತ್ತು ಧ್ಯಾನದಿಂದಾಗಿ ಆರೋಗ್ಯವನ್ನು ಲವಲವಿಕೆಯಿಂದ ಪೋಷಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಮೊದಲನೆ ಆದ್ಯತೆಯಾಗಬೇಕಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯವೆಂಬುದು ಎಲ್ಲರಿಗೂ ತಿಳಿದಿದ್ದರೂ, ಒತ್ತಡ ಜೀವನ ಶೈಲಿಯಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾಮಾನ್ಯವಾಗಿದೆ. ಹಣದಿಂದ ಬೇರೆಲ್ಲಾ ಖರೀದಿಸಬಹುದು ಆರೋಗ್ಯ ಖರೀದಿಸಲು ಸಾಧ್ಯವಿಲ್ಲ. ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯಬಹುದೇ ವಿನಹ, ಹಣದಿಂದ ಆರೋಗ್ಯ ಸಿಗಲು ಸಾಧ್ಯವಿಲ್ಲ. ನಿತ್ಯ ಯೋಗಾಭ್ಯಾಸದಿಂದ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ ಎಂದರು.
ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ಧಿನ್. ಮುಖ್ಯ ವೈದ್ಯಾಧಿಕಾರಿ ಡಾ.ಅಚ್ಯುತ್ ರಾಯ, ವೈದ್ಯೆ ಡಾ.ಒಂಟಿಗೋಡಿ ಪೂಜಾ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಗುರುಬಸವರಾಜ, ನ್ಯಾಯಾಲಯದ ಶಿರಸ್ತೇದಾರರಾದ ನೇತ್ರಾವತಿ, ಬಸವರಾಜ, ಇದ್ದರು. ವಕೀಲ ಕಾಗಿ ಪ್ರಹ್ಲಾದ್ ಕಾರ್ಯಕ್ರಮ ನಿರ್ವಹಿಸಿದರು.