ಕರಧರ್ಮ ಯಾವುದು?
ಬೆರಳುಗಳ ನೋಡುವುಗಳೊಂದರಂತೊಂದಿಲ್ಲ ಕರಧರ್ಮಕುಚಿತವಾ ಹೆಚ್ಚು ಕಡಮೆಗಳು |
ಪುರುಳ ಪಿಡಿವುವೆ ಬೆರಳ್ಗಳೆಲ್ಲ ಮೊಂದುದ್ದವಿರೆ ? ಸರಿಯಹುದು ಕಾರ್ಯದಲಿ – ಮಂಕುತಿಮ್ಮ ||
ಬೆರಳುಗಳನ್ನು ನೋಡು. ಅವುಗಳು ಒಂದರಂತೆ ಇನ್ನೊಂದಿಲ್ಲ. ಕೈಯ ಧರ್ಮಕ್ಕೆ ಹೆಚ್ಚು ಕಡಿಮೆಗಳು ಯೋಗ್ಯವೆ ಆಗಿವೆ. ಬೆರಳುಗಳೆಲ್ಲ ಒಂದೇ ಉದ್ದವಿರುತಿದ್ದರೆ ಅವು ವಸ್ತುವನ್ನು ಹಿಡಿದುಕೊಳ್ಳಲು ಶಕ್ತವಾಗುತ್ತಿದ್ದವೇನು? ಸೃಷ್ಟಿಯ ಕಾರ್ಯದಲಿ ಸರಿಯಾಗಿಯೇ ಇದೆ.
ನರನ ಕೈಯ ಬೆರಳುಗಳನ್ನು ಅವಲೋಕಿಸಿದರೆ ಒಂದು ಇನ್ನೊಂದರಂತೆ ಇರುವುದಿಲ್ಲವೆಂದು ತಿಳಿಯುತ್ತದೆ. ಈ ಹೆಚ್ಚು ಕಡಿಮೆಗಳು ಕರಧರ್ಮಕ್ಕೆ ಉಚಿತವೇ ಆಗಿರುತ್ತದೆ. ಒಂದು ವೇಳೆ ಈ ಬೆರಳುಗಳೆಲ್ಲಾ ಒಂದೇ ಕಡೆಯಲ್ಲಿದ್ದು, ಒಂದೇ ಉದ್ದವಾಗಿರುತ್ತಿದ್ದರೆ, ಅವುಗಳು ಯಾವುದಾದರೂ ವಸ್ತುವನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತಿತ್ತೆ! ಬೆರಳುಗಳ ಹೆಚ್ಚು ಕಡಿಮೆಗಳೇ ವಸ್ತುವನ್ನು ಹಿಡಿದುಕೊಳ್ಳಲು ಹಿಡಿತವಾಗಿ ಸಹಕರಿಸುತ್ತವೆ. ಆದ್ದರಿಂದ ಸೃಷ್ಟಿಯ ಕೆಲಸ ಸರಿಯಾಗಿಯೇ ನಡೆದಿದೆ. ಕರಧರ್ಮಕ್ಕನುಗುಣವಾಗಿಯೇ ಅದು ಕೆಲಸ ಮಾಡಿದೆ.