ಜನರ ಮಾತಿಗೆಲ್ಲಿ ಬೆಲೆಯಿರದು?
ಕಣ್ಣೆರಡದೇಕೆರಡುಮೊಂದೆ ಪಕ್ಕದೋಳೇಕೆ?
ಬೆನ್ನೊಳಂದೆದೆಯೊಳಂದಿರಲು ಸುಕರವಲ?
ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ ಸೊನ್ನೆ ಜನವಾಕ್ಕಲ್ಲಿ – ಮಂಕುತಿಮ್ಮ||
ಎರಡು ಕಣ್ಣುಗಳು ನಮಗೇಕೆ ಬೇಕು? ಎರಡೂ ಅಕ್ಕಪಕ್ಕದಲ್ಲಿಯೇ ಏಕಿರಬೇಕು? ಬೆನ್ನಿನಲ್ಲೊಂದು ಎದೆಯಲ್ಲೊಂದು ಇದ್ದಿದ್ದರೆ ಅನುಕೂಲಬಾಗಿರತ್ತಿತ್ತಲ್ಲವೇ? ಸೃಷ್ಟಿಯ ಕ್ರಮದಲ್ಲಿ ಅನ್ಯಾಯ ವಿಕಾರಗಳು ಅದೆಷ್ಟೋ ಇವೆ. ಜನರ ಮಾತು ಅಲ್ಲಿ ಸೊನ್ನೆಯಾಗುತ್ತದೆ.
ಸೃಷ್ಟಿಯ ರೀತಿ ನೀತಿಗಳನ್ನು ನಾವು ನೋಡಹತ್ತಿದರೆ ಅದೆಷ್ಟೋ ವಿಷಯಗಳು ಗೋಜಲು ಗೋಜಲಾಗಿ ಕಾಣಿಸುತ್ತವೆ. ಉದಾಹರಣೆಗೆ ನಮಗೆ ಎರಡು ಕಣ್ಣುಗಳು ಏಕೆ ಬೇಕು? ಒಂದು ಕಣ್ಣಿದ್ದರೂ ಸಾಕಲ್ಲವೇ? ಆ ಎರಡೂ ಕಣ್ಣುಗಳು ಅಕ್ಕಪಕ್ಕದಲ್ಲಿಯೇ ಏಕೆ ಬೇಕು? ಬೆನ್ನಿನಲ್ಲೊಂದು ಎದೆಯಲ್ಲೊಂದು ಇದ್ದಿದ್ದರೆ ಹಿಂದೆ ಮುಂದೆ ಎಲ್ಲಾ ಕಡೆ ನೋಡಬಹುದಿತ್ತು. ಹೀಗೆ ಸೃಷ್ಟಿಯ ವಿಧಾನದಲ್ಲಿ ಅನ್ಯಾಯವೆನಿಸುವಂಥವು, ವಿಕಾರವೆನಿಸುವಂಥವು ಅದೆಷ್ಟೋ ಇವೆ. ನಮ್ಮ ಅನುಕೂಲಕ್ಕೆ ಅದು ಬದಲಾಗುವಂತಿದ್ದರೆ ಒಳ್ಳೆಯದಿತ್ತು. ಆದರೆ ಅ ಬಗ್ಗೆ ನಾವೇನೂ ಮಾತಮಾಡುವಂತಿಲ್ಲ, ಸೃಷ್ಟಿಯ ಕ್ರಮವನ್ನು ಆಕ್ಷೇಪಿಸುವಂತಿಲ್ಲ. ಏನಿದೆಯೋ ಅದನ್ನೇ ಹೊಂದಾಣಿಸಿಕೊಂಡು ಹೋಗಬೇಕಷ್ಟೇ.
ಪ್ರಕಟಣೆ ವಿಷಾದ : ‘ನಿತ್ಯ ಕಗ್ಗದ ಬೆಳಕು’ ಓದುಗರಲ್ಲಿ ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ನಿಂದ ವಿಷಾದ ವ್ಯಕ್ತಪಡಿಸುತ್ತೇವೆ. ಕಳೆದ ಮೂರು ದಿನಗಳಿಂದ ವೆಬ್ಸೈಟ್ ತಾಂತ್ರಿಕ ದೋಷ ಮತ್ತು ವೆಬ್ ಅಪ್ಡೇಟ್ ಕಾರ್ಯದಿಂದ ‘ನಿತ್ಯ ಕಗ್ಗದ ಬೆಳಕು’ ಪ್ರಕಟಗೊಳಿಸಲು ಸಾಧ್ಯವಾಗಿಲ್ಲ. ಓದುಗರ ಅಪೇಕ್ಷೆಯಂತೆ ನಿತ್ಯ ಪ್ರಕಟಣೆ ಅಡಚಣೆ ಆಗದಂತೆ ಕ್ರಮ ವಹಿಸಲಾಗುತ್ತದೆ.