ಮೈಸೂರು ದಸರಾ ಉತ್ಸವದಲ್ಲಿ ಸ್ಥಳೀಯ ಹಿಂದೂಸ್ತಾನಿ ಗಾಯಕ ಸಿದ್ಧೇಂದ್ರ ಕುಮಾರ್ ಹಿರೇಮಠ್ ಆಯ್ಕೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅರಮನೆ ಮುಖ್ಯ ವೇದಿಕೆಯಲ್ಲಿ ಅ.10 ರಂದು ಜರುಗುವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ದ ಹಿಂದೂಸ್ತಾನಿ ಗಾಯಕ ಸ್ಥಳೀಯರಾದ ಸಿದ್ದೇಂದ್ರ ಕುಮಾರ್ ಹಿರೇಮಠ್ ಆಯ್ಕೆಯಾಗಿದ್ದಾರೆ.
ತುಮುಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿದ್ದೇಂದ್ರ ಹಿರೇಮಠರವರು ಪಂಡಿತ ಶಿವಲಿಂಗಯ್ಯ ಗವಾಯಿಗಳ ಶಿಷ್ಯರಾಗಿ ಸಂಗೀತಾಭ್ಯಾಸ ಮಾಡಿರುವ ಇವರು ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಮುಂದುವರಿಸಿದ್ದರು. ಪ್ರಸ್ತುತ ಕಿರಾಣಾ ಘರಾಣೆಯಲ್ಲಿ ಪ್ರಾವಿಣ್ಯತೆ ಪಡೆದಿರುವ ಪಂಡಿತ್ ಕೈವಲ್ಯ ಕುಮಾರ್ ಗುರುವ್ ಅವರ ಶಿಷ್ಯರಾಗಿ ಸಂಗೀತ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಅಭಂಗವಾಣಿ, ಹಿಂದಿ ಭಜನ್, ದಾಸವಾಣಿ ಹಾಗೂ ವಚನ ಗಾಯನದಲ್ಲಿ ಪರಿಣಿತಿ ಹೊಂದಿದ್ದಾರೆ. ಸವಾಯಿ ಗಂಧರ್ವರವರ ಪುಣ್ಯತಿಥಿ ಅಂಗವಾಗಿ ಕುಂದುಗೋಳದಲ್ಲಿ ನಡೆದ ಸಂಗೀತೋತ್ಸವ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿಯಲ್ಲಿ ಹಾಗೂ ಪಂಡಿತ್ ಭೀಮಸೇನ ಜೋಷ್ಇಅವರ ಭೀಮಪಲಾಸ್ ಸಂಗೀತೋತ್ಸವದಲ್ಲಿ ಹಾಡಿದ ಹೆಗ್ಗಳಿಕೆ ಇವರದ್ದು. ಇವರು ಹಗರಿಬೊಮ್ಮನಹಳ್ಳಿ ನಿವಾಸಿಯಾಗಿ ಸಂಗೀತ ಸೇವೆ ಸಲ್ಲಿಸಿದ್ದರು. ಬಾಚಿಗೊಂಡೆನಹಳ್ಳಿಯ ಕೌದಿ ಮಹಾಂತೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯಗುರುಗಳಾಗಿದ್ದ ಎಸ್.ಎಸ್.ಎಂ.ಹಿರೇಮಠ್ ರವರ ಅಳಿಯ ಸಿದ್ದೇಂದ್ರ ಹಿರೇಮಠ್ ರವರು. ಹಗರಿಬೊಮ್ಮನಹಳ್ಳಿಯಲ್ಲಿ ಬಹಳ ವರ್ಷ ವಾಸವಿದ್ದರು. ಹಾಗಾಗೀ ಸ್ಥಳೀಯರಿಗೆ, ಅವರ ಸ್ನೇಹಿತರಿಗೆ ದಸರಾ ಉತ್ಸವದಲ್ಲಿ ಆಯ್ಕೆಯಾಗಿರುವುದು ಸಂತಸ ಮೂಡಿಸಿದೆ. ಸದ್ಯಕ್ಕೆ ಸಿದ್ದೇಂದ್ರ ಹಿರೇಮಠ್ರ ಸಹೋದರ ಗುರುಹಿರೇಮಠ್, ಸೊಸೆ ಸಂಗೀತಾ ಹಿರೇಮಠ್ ರವರು ಹಗರಿಬೊಮ್ಮನಹಳ್ಳಿಯಲ್ಲಿ ಸಂಗೀತ ಸೇವೆ ನೀಡುತ್ತಿದ್ದಾರೆ.