ಆತ್ಮೋದ್ಧಾರ ಆಗುವುದೆಂದು ?
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ |
ಉದ್ಧರಿಸುವೆನು ಜಗವೆನೆನ್ನುತಿಹಸಖನೆ ನಿನ್ನುದ್ಧಾರವೆಷ್ಟಾಯ್ತೋ ? ಮಂಕುತಿಮ್ಮ ||
ಎದ್ದು ಎದ್ದು ಬೀಳುತ್ತಿಯೆ, ಗುದ್ದಾಡಿ ಸೋಲುತ್ತೀಯೆ, ಗದ್ದಲವನ್ನು ತುಂಬಿ ಪ್ರಸಿದ್ಧನಾಗುತ್ತೀಯೆ. ಜಗತ್ತನ್ನು ಉದ್ದರಿಸುತ್ತೇನೆ ಎನ್ನುತ್ತೀಯೆ, ಗೆಳೆಯ, ನಿನ್ನ ಉದ್ದಾರ ಎಷ್ಟಾಯ್ತು ಎಂದು ಚಿಂತಿಸಿದ್ದೀಯೇನು ?
ಇಂದಿನ ರಾಜಕಾರಣಿಗಳಿಗೆ ಡಿ.ವಿ.ಗುಂಡಪ್ಪನವರು ಅಂದೇ ಪ್ರಶ್ನಿಸಿದ್ದಾರೆ. ಚುನಾವಣೆಗೆ ನಿಲ್ಲುತ್ತಾರೆ. ಗೆದ್ದವರು ಸೋಲುತ್ತಾರೆ. ಸೋತವರು ಗೆಲ್ಲುತ್ತಾರೆ. ಏಳುಬೀಳುಗಳು ಅವರ ಬದುಕಿನಲ್ಲಿ ನಿರಂತರ. ಅಧಿಕಾರಕ್ಕಾಗಿ ಕಚ್ಚಾಡುತ್ತಾರೆ. ಗುದ್ದಾಟ ಬಡಿದಾಟಗಳು ನಡೆಯುತ್ತಲೇ ಇರುತ್ತವೆ. ಜನಗಳ ಮಧ್ಯದಲ್ಲಿ ವಿಷಬೀಜವನ್ನು ಬಿತ್ತಿ ಅವರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿ ತಾನು ಅವರನ್ನು ಸಮಾಧಾನ ಮಾಡಿದಂತೆ ನಟಿಸಿ ಪ್ರಸಿದ್ದರಾಗುತ್ತಾರೆ. ಮಾತೆತ್ತಿದ್ದರೆ ಜಗತ್ತಿನ ಉದ್ದಾರದ ಅಮೃತ ನುಡಿ ಬಿಂದುಗಳು ಅವರಿಂದ ಹೊರಹೊಮ್ಮುತ್ತಿರುತ್ತವೆ. ಬಾಹ್ಯ ಪ್ರಪಂಚಕ್ಕೆ ನಿರಂತರ ಅಂಟಿಕೊಂಡ ಅದೇ ಸರ್ವಸ್ವವೆಂದು ತಿಳಿದುಕೊಂಡು ಹೋರಾಡುತ್ತಾರೆ. ಗುಂಡಪ್ಪ ಪ್ರಶ್ನಿಸುತ್ತಾರೆ. ‘ ಸಖನೇ, ನಿನ್ನ ಆತ್ಮದ ಉದ್ಧಾರ ಇದರಿಂದ ಎಷ್ಟಾಯ್ತು?’ ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮ ಭಗವಂತ ನಮಗೆ ವಿವೇಕವನ್ನು ಕೊಟ್ಟಿದ್ದಾನೆ. ಈ ನಶ್ವರ ದೇಹದಿಂದ ಅನಶ್ವರವಾದುದನ್ನು ಉಳಿಸಿ ಹೋಗಬೇಕಾದುದು ನಮ್ಮ ಬದುಕಿನ ತಿರುಳು. ಸಂಪಾದಿಸಿದ ಹಣ, ಆಸ್ತಿ ಇವೆಲ್ಲ ಅಳಿದು ಹೋಗುವಂಥವು. ಸೇವೆ, ತ್ಯಾಗ, ದಾನ, ಒಳ್ಳೆಯ ಕಾರ್ಯಗಳು ಮನುಷ್ಯನ ಹುಟ್ಟುನ್ನು ಸಾರ್ಥಕಗೊಳಿಸುತ್ತವೆ. ಇವು ಮನುಷ್ಯನಿಗೆ ಅಮೃತತ್ವವನ್ನು ನೀಡುತ್ತವೆ. ಇದರಿಂದಲೇ ಆತ್ಮೋದ್ಧಾರ.