ಬ್ರೇಕಿಂಗ್ ನ್ಯೂಸ್ : ಹಳ್ಳದಲ್ಲಿ ಕೊಚ್ಚಿಹೋದ ಮಿನಿಲಾರಿ, ತಪ್ಪಿದ ಭಾರಿ ಆನಾಹುತ, ಕೂಲಿ ಕಾರ್ಮಿಕರು ಸೇಫ್
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
ವಿಜಯಯನಗರ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ಹೊಸಪೇಟೆ, ಕೂಡ್ಲಿಗಿ, ಸಂಡೂರು ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿರುವುದು ಕಂಡು ಬಂದಿದೆ.
ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಗೂಡ್ಸ್ ಲಾರಿಯೊಂದು ಪಿಚಾರಹಟ್ಟಿಯ ಬಳಿ ಹಳ್ಳದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ವಾಹನದಲ್ಲಿದ್ದ ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಕೆಳಗಡೆ ಇಳಿಸಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನ ನೀರಿನಲ್ಲಿ ಕೊಚ್ಚಿಹೋಗಿದೆ.
ಕೂಡ್ಲಿಗಿಯ ಕಾನಾಹೊಸಹಳ್ಳಿಯಲ್ಲಿನ ಗುಜರಿ ಅಂಗಡಿಗೆ ನೀರು ನುಗ್ಗಿ ಗುಜುರಿಯ ಕಬ್ಬಿಣದ ಚೀಲಗಳು ಬಸ್ ನಿಲ್ದಾಣಕ್ಕೆ ಹರಿದು ಬಂದಿವೆ. ಜರಿಮಲೆ ಗ್ರಾಮದಲ್ಲಿ ಹೇಮಂತ್ ಎಂಬುವರ ಮನೆ ಸೇರಿದಂತೆ ಇತರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ದಲಿತ ಕಾಲನಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ಸಂಚಾರ ಬಂದ್ ಆಗಿದೆ. ಸಿದ್ದಾಪುರದ ದೊಡ್ಡಹಳ್ಳ, ಹುಡೇಂ, ತಾಯಕನಹಳ್ಳಿಯ ಚಿನ್ನಹಗರಿ ತುಂಬಿ ಹರಿಯುತ್ತಿದೆ. ಹಾಗೂ ಹುಲಿಕೆರೆ, ಕಾನಾಹೊಸಹಳ್ಳಿಯ ಕೆರೆಗಳಿಗೆ ಅರ್ಧದಷ್ಟು ನೀರು ಹರಿದು ಬಂದಿದೆ. ಹೊಸಪೇಟೆಯ ರಾಯರ ಕೆರೆ ಪ್ರದೇಶದಲ್ಲಿ ಹೆಚ್ಚು ನೀರು ಹರಿದ ಹಿನ್ನೆಲೆಯಲ್ಲಿ ಅನೇಕ ಕೃಷಿ ಜಮೀನುಗಳಿಗೆ ನೀರು ನುಗ್ಗಿ ರೈತರು ಬೆಳೆದ ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಗಳಿಗೆ ಹಾನಿಯಾಗಿದೆ.