ಋಣ ಹೇಗೆ ಹರಿಯುತ್ತಿರುತ್ತದೆ?
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ ! |
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! ಗುಪ್ತಗಾಮಿನಿಯೊ ಋಣ – ಮಂಕುತಿಮ್ಮ ||
ನೀನು ಉಣ್ಣುವ ಊಟ ನಿನಗೆ ಎಲ್ಲಿಂದ ಬಂದಿದೆ? ನಮಗೆ ದೊರೆತ ಭತ್ತ ಎಲ್ಲಿಂದ ಬಂದಿದೆ? ಗೊಬ್ಬರ ಎಲ್ಲಿಯದೊ! ನೀರು ಎಲ್ಲಿಯದೊ! ನಿನ್ನ ಪಾಲಿನ ಅಡುಗೆಯೂ ಯಾರಾರದೋ ಶ್ರಮದಿಂದ ಬಂದಿದೆ. ಹೀಗೆ ಋಣವೆಂಬುದು ರಹಸ್ಯವಾಗಿ ಹರಿಯುವಂಥದ್ದು.
ನಮ್ಮೆಲ್ಲರ ಬದುಕು ನಡೆಯುತ್ತಿರುವುದು ಒಂದಲ್ಲ ಒಂದು ಋಣದ ಭಾರದಿಂದ. ನಮಗೆ ದೊರಕಿದ ಊಟ ಎಲ್ಲಿಂದಲೋ ಬಂದದು. ಊಟಕ್ಕೆ ಒದಗಿ ಬಂದ ಭತ್ತ ಇನ್ನೆಲ್ಲಿಂದಲೋ ಬಂದಿರುತ್ತದೆ. ಆ ಭತ್ತ ಬೆಳೆಯಲು ಎಲ್ಲಿಂದಲೋ ಗೊಬ್ಬರ ಬಂದಿರುತ್ತದೆ. ನೀರು ಇನ್ನೆಲ್ಲಿಂದಲೋ ಬಂದಿರುತ್ತದೆ. ಹೀಗೆ ನಾವುಣ್ಣುವ ಅನ್ನದ ಹಿಂದೆ ಅದೆಷ್ಟು ಋಣ ಭಾರ ಅಡಗಿದೆ ! ಮೇಲ್ನೋಟಕ್ಕೆ ಕಾಣಿಸುವುದು ನನ್ನ ಊಟ. ಆ ಊಟದ ಹಿಂದೆ ಋಣದ ಜಾಲವೇ ಇರುತ್ತದೆ. ಆ ಜಾಲವನ್ನು ತಿಳಿಯಲಾಗದು. ಅದು ಗುಪ್ತಗಾಮಿನಿಯಾಗಿಯೇ ಹರಿಯುತ್ತಿರುತ್ತದೆ.