ಕೊಳೆಗೂ ಬೆಲೆಯುಂಟೇ?
ಕೊಳಕೆಂದು ಹುಳುಕೆಂದು ಹೇಸಿಗೆಯ ಹುಳುವೆಂದು ಇಳೆಯೊಳಾವುದರೊಮಸಹ್ಯ ಪಡಬೇಡ |
ಬೆಲೆಯುಂಟು ಕೊಳೆಗಮೀಜೀವಸಾಮಗ್ರಿಯಲಿ ಕೊಳೆಶುಚಿಖ್ಯಾಪಕವೊ – ಮಂಕುತಿಮ್ಮ ||
ಈ ಭೂಮಿಯಲ್ಲಿ ಯಾವುದನ್ನು ಕೊಳಕು, ಹುಳುಕು, ಹೇಸಿಗೆಯ ಹುಳು ಎಂದು ತಿಳಿದು ಅಸಹ್ಯ ಪಡಬೇಡ. ಈ ಜೀವ ಸಾಮಾಗ್ರಿಯಲ್ಲಿ ಕೊಳೆಗೂ ಬೆಲೆಯಿದೆ. ಏಕೆಂದರೆ ಕೊಳೆಯೇ ಶುಚಿಯಾದುದನ್ನು ಬೆಳಕಿಗೆ ತರುವಂಥದ್ದು.
ಈ ಜಗತ್ತಿನಲ್ಲಿ ಭಗವಂತ ಸ್ಪಷ್ಟಿಸಿದ ಪ್ರತಿಯೊಂದು ವಸ್ತುವಿಗೂ ಒಂದು ಅರ್ಥವಿದೆ. ಅವನ ದೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ಬೆಟ್ಟದಲ್ಲಿ ಮಲ್ಲಿಗೆ ಅರಳಿ ಸುವಾಸನೆಯನ್ನು ಹರಡಿದರೆ ಕೊಚ್ಚೆಯಲ್ಲಿ ಕಮಲ ಅರಳಿ ಸೊಬಗನ್ನು ಪಸರಿಸುತ್ತದೆ. ಹೂವು ಮುಳ್ಳು, ಕಲ್ಲು ಮಣ್ಣು, ಬೆಟ್ಟ ಕಣಿವೆಗಳು, ನದಿ ಕೊಳಗಳು ಹೀಗೆ ಸೃಷ್ಟಿಯ ವೈಪರೀತ್ಯಗಳು ಬಹಳ. ಸೂರ್ಯೋದಯ ಒಂದು ಕಡೆಯಾದರೆ ಸೂರ್ಯಸ್ತದ ದೃಶ್ಯ ಇನ್ನೊಂದೆಡೆ. ಪ್ರೇಮಘೋರಗಳು ಭಗವಂತನ ದೃಷ್ಟಿಯಲ್ಲಿ ಒಂದೇ. ಕೆಲವೊಮ್ಮೆ ನಾವು ಕೊಳಕನ್ನು ಕಂಡು ಅಸಹ್ಯಪಟ್ಟುಕೊಳ್ಳುತ್ತೇವೆ. ಗುಂಡಪ್ಪನವರು ಇದು ಕೊಳಕು, ಇದು ಹುಳುಕು, ಇದು ಹೇಸಿಗೆಯ ಹುಳವೆಂದು ಯಾವುದರಲ್ಲಿಯೂ ಅಸಹ್ಯಪಟ್ಟುಕೊಳ್ಳಬೇಡ ಎಂದು ಇಲ್ಲಿ ಸೂಚಿಸಿದ್ದಾರೆ. ಕಾರಣ ಈ ಭೂಮಿಯಲ್ಲಿ ಕೊಳೆಗೂ ಬೆಲೆಯಿದೆ. ಅವೆಲ್ಲವೂ ಜೀವಸಾಮಗ್ರಿಗಳು, ಕೊಳೆ ಶುಚಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಕೋಗಿಲೆಯ ಇಂಪು ಕಾಗೆಯ ಧ್ವನಿಯಿಂದ ನಿರ್ಧಾರಿತವಾಗುತ್ತದೆ. ಬುದ್ಧಿವಂತನ ಬುದ್ಧಿಮತ್ತೆಯನ್ನು ಅಳೆಯುವ ಮಾಪದಂಡ ದಡ್ಡರ ದಡ್ಡತನ. ಕೊಳೆಯ ನೀರನ್ನು ಉಪಯೋಗಿಸಿಕೊಂಡು ತೆಂಗಿನ ಮರ ಮಧುಮಧುರವಾದ ನೀರನ್ನು ಕೊಡುತ್ತದೆ. ಆದ್ದರಿಂದ ಈ ಜಗತ್ತಿನಲ್ಲಿ ಎಲ್ಲವೂ ಮಧುರವೇ.