ಬಿಡುಗಡೆಗೆ ದಾರಿ ಯಾವುದು ?
ಎಡರು ತೊಡರೆನಲೇಕೆ ? ಬಿಡಿಸುಮತಿಗಾದನಿತ ದುಡಿ ಕೈಯಿನಾದನಿತು, ಪಡು ಬಂದ ಪಾಡು ಬಿಡುಮಿಕ್ಕುದನು ವಿಧಿಗೆ, ಬಿಡದಿರುಪಶಾಂತಿಯನು ಬಿಡುಗಡೆಗೆ ದಾರಿಯದು – ಮಂಕುತಿಮ್ಮ ||
ಬದುಕಿನಲ್ಲಿ ಅಡ್ಡಿ ಅಡಚಣೆಗಳು ಇವೆ ಅಂದುಕೊಳ್ಳುವುದೇಕೆ? ಬುದ್ಧಿಯನ್ನು ಉಪಯೋಗಿಸಿಕೊಂಡು ಸಾಧ್ಯವಾದಷ್ಟು ಬಿಡಿಸಿಕೋ, ಕೈಲಾದಷ್ಟು ದುಡಿ, ಬಂದುದನ್ನು ಅನುಭವಿಸು. ಉಳಿದುದ್ದನ್ನು ವಿಧಿಗೆ ಬಿಟ್ಟುಬಿಡು. ಶಾಂತಿಯನ್ನು ಮಾತ್ರ ಕಳೆದುಕೊಳ್ಳಬೇಡ. ಅದೇ ಬಿಡುಗಡೆಗೆ ದಾರಿ.
ಜೀವನದಲ್ಲಿ ಸುಖ ದುಃಖಗಳು ಲಾಭ ನಷ್ಟಗಳು ಜಯಾಪಜಯಗಳು ಸ್ವಾಭಾವಿಕವಾದವುಗಳು. ಒಬ್ಬನಿಗೆ ಜಯವಾದರೆ ಇನ್ನೊಬ್ಬರಿಗೆ ಅಪಜಯವಾಗಲೇಬೇಕು. ಒಮ್ಮೆ ಸುಖ, ಮತ್ತೊಮ್ಮೆ ದುಃಖ. ಜ್ಞಾನಿಯಾದವನು ಎಲ್ಲವನ್ನೂ ಸಮಾನಾಗಿ ಕಾಣುತ್ತಾನೆ.
“ದುಃಖೇಷ್ವನುದ್ವಿಗ್ನಮನಾಃಸುಖೇಷು ವಿಗತಸ್ತೃಹಃ |
ವೀತತರಾಗಭಯ ಕ್ರೋಧಃ ಸ್ಥಿತಧೀರ್ಮುನಿರುಚ್ಯತೇ”||
ದುಃಖ ಬಂದಾಗ ಉದ್ವೇಗ ಕೊಳಗಾಗದೆ, ಸುಖ ಬಂದಾಗ ಅದಕ್ಕಾಗಿ ಆಸೆ ಪಡದೆ, ಅನುರಾಗ, ಭಯ, ಕೋಪ ಇವುಗಳನ್ನೆಲ್ಲ ಪರಿತ್ಯಜಿಸಿದವನೇ ನಿಜವಾದ ಜ್ಞಾನಿ ಎಂದು ಗೀತೆ ಸಾರುತ್ತದೆ. ಜಗತ್ತಿನ ಗೊಂದಲಗಳಿಂದ ಬಿಡುಗಡೆಯನ್ನು ನಾವು ಹೇಗೆ ಹೊಂದಬೇಕು ಎಂಬುದನ್ನು ಡಿವಿಜಿ ಮೇಲಿನ ಪದ್ಯದಲ್ಲಿ ಸೂಚಿಸಿದ್ದಾರೆ. ಕಷ್ಟಗಳ ಬಗ್ಗೆ ಹೆಚ್ಚು ಚಿಂತಿಸಬೇಡ, ಸಾಧ್ಯವಾದಷ್ಟು ಅವುಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸು, ಯಥಾ ಶಕ್ತಿ ದುಡಿಯುತ್ತಿರು. ಬಂದದ್ದನ್ನೆಲ್ಲ ಅನುಭವಿಸು. ಉಳಿದುದನ್ನು ವಿಧಿಗೆ ಬಿಟ್ಟುಬಿಡು. ಆದರೆ ಎಂದೂ ಮನಸ್ಸಿನ ಶಾಂತಿಯನ್ನು ಮಾತ್ರ ಕಳೆದುಕೊಳ್ಳಬೇಡ. ಅದೇ ಮುಂದೆ ಬಿಡುಗಡೆಗೆ ದಾರಿಯಾಗುತ್ತದೆ. ಮನಸ್ಸಿನಲ್ಲಿ ಶಾಂತಿ ಇದ್ದರೆ ಮಾತ್ರ ಮೈಯಲ್ಲಿ ಕಾಂತಿ ಅಲ್ಲವೇ?