ಹಂಪಿ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಕಂಕಣಬದ್ಧ : ಎಸಿ ವಿವೇಕಾನಂದ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
ಪ್ರವಾಸಿಗರಿಗೆ ಶಾಂತಿ ಸುರಕ್ಷತೆ ಕಲ್ಪಿಸಲು ಪ್ರವಾಸಿ ಮಾರ್ಗದರ್ಶಿಗಳು ಕೈಜೋಡಿಸಬೇಕು ಎಂದು ಹೊಸಪೇಟೆ ಎಸಿ ವಿವೇಕಾನಂದ ಹೇಳಿದರು.
ತಾಲೂಕಿನ ಹಂಪಿಯ ಶ್ರೀವಿರೂಪಾಕ್ಷ ದೇಗುಲದ ರಥಬೀದಿಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಪ್ರವಾಸೋದ್ಯಮ ಮತ್ತು ಶಾಂತಿ ಧ್ಯೇಯ ವಾಕ್ಯದಂತೆ ಹಂಪಿಯ ವಾತಾವರಣದಲ್ಲಿ ಅಹಿಂಸೆಗೆ ಅವಕಾಶ ನೀಡದಂತೆ ವಿಶ್ವಶಾಂತಿ ಬಯಸುವ ವಾತಾವರಣ ಸೃಷ್ಟಿಸಬೇಕಿದೆ. ಪ್ರವಾಸೋದ್ಯಮ ಉತ್ತೇಜನ ಆದ್ಯತೆ ನೀಡಿ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಜಯನಗರ ಜಿಲ್ಲಾಡಳಿತ ಕಂಕಣಬದ್ಧವಾಗಿದೆ ಎಂದರು.
ಹೊಟೇಲ್ ಮಯೂರ ಭುವನೇಶ್ವರಿ (ಕೆಎಸ್ಟಿಡಿಸಿ) ವ್ಯವಸ್ಥಾಪಕ ಸುನೀಲ್ ಮಾತನಾಡಿ, ಹಂಪಿಯ ನೈಸರ್ಗಿಕ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರಿಗೆ ಮಾತಂಗ ಪರ್ವತ ವೀಕ್ಷಿಸುವ ಮೂಲಕ ಹಂಪಿಗೆ ಸೆಳೆಯುವ ಪ್ರಯತ್ನ ಮಾಡಬೇಕಿದೆ ಎಂದರು.
ಉಪನ್ಯಾಸಕ ಶಿವನಗೌಡ ಸಾತಮಾರ ಮಾತನಾಡಿ, ಹಂಪಿಗೆ ಪ್ರಮುಖವಾಗಿ ಪ್ರವಾಸಿಗರು ವಿರಾಮ, ಮನೋರಂಜನೆ, ಜ್ಞಾನ ಪಡೆಯುವುದಕ್ಕೆ ಆಗಮಿಸುತ್ತಾರೆ. ಇಂದಿನ ಯುವಕರು ಪ್ರವಾಸವನ್ನು ಒಂದು ಭಾಗ ಮಾಡಿಕೊಂಡಿದ್ದಾರೆ. ಪ್ರವಾಸಿಗರಿಗೆ ಆಹಾರ, ವಸತಿ, ಮನೋರಂಜನೆ, ಸಂಸ್ಕೃತಿ, ಪರಂಪರೆ ಇವೆಲ್ಲವೂ ಸೇರಿ ಪ್ರವಾಸೋದ್ಯಮವಾಗಲಿದೆ. ಕೇಂದ್ರ ಸರ್ಕಾರ ಪ್ರವಾಸೋದ್ಯಮಕ್ಕೆ ವಿಶ್ವಮಟ್ಟದ ಮಾನ್ಯತೆ ನೀಡಿರುವುದಕ್ಕೆ ಹಂಪಿಯಲ್ಲಿ ಜಿ-20 ಶೃಂಗಸಭೆ ಆಯೋಜಿಸಿದ್ದೇ ಸಾಕ್ಷಿಯಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹಿಂದಿನ ವರ್ಷ ಪ್ರವಾಸೋದ್ಯಮ – ಹಸಿರು ಬಂಡವಾಳ ಧ್ಯೇಯವಾಕ್ಯವಾಗಿತ್ತು. ಅದರಂತೆ ಇಡೀ ಹಂಪಿಯ ಎಲ್ಲಾ ಸ್ಮಾರಕಗಳನ್ನು ಸ್ವಚ್ಛಂದ ಹಸಿರು ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ವೇದಿಕೆಯಲ್ಲಿ ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಉಪಾಧ್ಯಕ್ಷ ಎಸ್.ಹನುಮಂತ, ಸದಸ್ಯೆ ರೂಪಾ,
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಆಯುಕ್ತ ಚಂದ್ರಪ್ಪ, ವಿರೂಪಾಕ್ಷ ದೇವಾಲಯದ ಇಒ ಹನುಮಂತಪ್ಪ ವೇದಿಕೆಯಲ್ಲಿದ್ದರು.
ಈ ವೇಳೆ ವೇದಿಕೆಯಲ್ಲಿ ಪ್ರವಾಸಿ ಮಿತ್ರರಾದ ಗೃಹರಕ್ಷಕರಿಗೆ ಗೌರವಿಸಿ ಸನ್ಮಾನಿಸಿದರು. ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಂಪಿಯ ರಂಜು ಯೋಗಟ್ರಸ್ಟ್ ಯೋಗ ಪ್ರದರ್ಶನಗಳು ಜರುಗಿದವು. ಹಂಪಿಯ ಎಲ್ಲಾ ಪ್ರವಾಸಿ ಮಾರ್ಗದರ್ಶಿಗಳು ಭಾಗವಹಿಸಿದ್ದರು.