ಭವಿಷ್ಯದ ಚಿಂತೆ ನಮಗೇಕೆ?
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? ಸಂಧರ್ಭ ಬರಲಿ, ಬಂದಾಗಳಾ ಚಿಂತೆ |
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು ಇಂದಿಗಿಂದಿನ ಬದುಕು – ಮಂಕುತಿಮ್ಮ ||
ಮುಂದೆ ಏನಾಗುವುದು ಮತ್ತೆ ಏನಾಗುವುದೋ ಇಂದು ಆ ಮಾತೇಕೆ? ಸಂದರ್ಭ ಬಂದಾಗ ಆ ಚಿಂತೆ. ಇದನ್ನೆಲ್ಲಾ ಹೊಂದಿಸುವವನು ಯಾವನೋ ಬೇರೆ ಇದ್ದಾನೆ. ಅವನು ನಿನ್ನ ಸೇವಕನಲ್ಲ. ಇವತ್ತಿನ ಬದುಕು ಇವತ್ತಿಗೆ.
ಮಾನವ ಸಾಮಾನ್ಯವಾಗಿ ವರ್ತಮಾನದ ಬದುಕನ್ನು ಮರೆತು ಭೂತಕಾಲದ ಚಿಂತೆಯನ್ನು ಹೊತ್ತು ಭವಿಷ್ಯದ ಕನಸನ್ನು ಕಾಣುತ್ತಾ ಬದುಕುತ್ತಾನೆ. ಮುಂದೆ ಏನಾಗುವುದೋ, ಆ ಮೇಲೆ ಏನಾಗುವುದೋ ಎಂಬ ಚಿಂತೆಯನ್ನು ಇಂದು ಮಾಡುವ ಅಗತ್ಯವಿರುವುದಿಲ್ಲ. ಮನುಷ್ಯ ಆ ಚಿಂತೆಗಳನ್ನು ಬಿಟ್ಟುಬಿಡಬೇಕು. ಏಕೆಂದರೆ ಭೂತ ಭವಿಷ್ಯಗಳು ಅವನ ಅಧೀನದಲ್ಲಿರುವುದಿಲ್ಲ. ಏನು ಬರುತ್ತದೆಯೋ, ಹೇಗೆ ಬರುತ್ತದೆಯೋ ಅದನ್ನು ಹಾಗೆಯೇ ಸ್ವೀಕರಿಸಬೇಕಾಗುತ್ತದೆ. ಅವೆಲ್ಲ ಕಣ್ಣೆದುರಿಗೆ ಬಂದಾಗ ಮಾತ್ರ ಅದರ ಬಗ್ಗೆ ಚಿಂತೆ ಮಾಡಿದರೆ ಸಾಕು. ಏಕೆಂದರೆ ಆ ಸಂದರ್ಭಗಳನ್ನು ಹೊಂದಿಸಿ ಕೊಡುವವನು ಬೇರೆಯೇ ಇದ್ದಾನೆ. ಅವನು ನಿನ್ನ ಅಧೀನನಲ್ಲ. ಅಂದ ಮೇಲೆ ಆ ಬಗ್ಗೆ ಹೆಚ್ಚಿನ ಚಿಂತೆಯ ಅಗತ್ಯವಿಲ್ಲ. ಇಂದಿನ ಬದುಕಿನ ಬಗ್ಗೆ ಚಿಂತೆ ಮಾಡಿದರೆ ಸಾಕು.