ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷರಾಗಿ ಮರಿರಾಮಪ್ಪ, ಉಪಾಧ್ಯಕ್ಷರಾಗಿ ಅಂಬಿಕಾ ದೇವೆಂದ್ರಪ್ಪ ಆಯ್ಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಭಾರಿ ಕುತೂಹಲ ಮೂಡಿಸಿದ್ದ ಹಗರಿಬೊಮ್ಮನಹಳ್ಳಿ ಪುರಸಭೆ ಗದ್ದುಗೆಗೆ ಕಾಂಗ್ರೆಸ್ ಪಕ್ಷದ ವಿ.ಮರಿರಾಮಪ್ಪ, ಉಪಾಧ್ಯಕ್ಷರಾಗಿ ಅಂಬಿಕಾ ದೇವೆಂದ್ರಪ್ಪ ಆಯ್ಕೆಯಾದರು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಒಬಿಸಿ ಮೀಸಲಾತಿ, ಉಪಾಧ್ಯಕ್ಷೆ ಸ್ಥಾನಕ್ಕೆ ಎಸ್ಟಿ (ಮಹಿಳೆ) ಮೀಸಲಾತಿ ಘೋಷಣೆಯಾಗಿತ್ತು.
ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಬಣಕಾರ ಸುರೇಶ್ ನಾಮಪತ್ರ ಸಲ್ಲಿಸಿದರೇ, ಕಾಂಗ್ರೆಸ್ ಪಕ್ಷದಿಂದ ವಿ.ಮರಿರಾಮಪ್ಪ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅಂಬಿಕಾ ದೇವೆಂದ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಿಂದ 12 ಜನ ಸದಸ್ಯರ ಸ್ಥಾನ, ಬಿಜೆಪಿ ಪಕ್ಷದಿಂದ 11 ಜನ ಸದಸ್ಯರು ಇದ್ದಾರೆ.
ಆದರೆ ಮತ ಪ್ರಕ್ರಿಯೆಯಲ್ಲಿ
ಬಿಜೆಪಿ ಪಕ್ಷದ ಇಬ್ಬರು ಸದಸ್ಯರು ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಅಚ್ಚರಿ ಮೂಡಿಸಿದರು. ಕೈ ಎತ್ತುವ ಮೂಲಕ ಮತ ಪ್ರಕ್ರಿಯೆ ನಡೆಯಿತು. 12 ಕಾಂಗ್ರೆಸ್ ಸದಸ್ಯರು, ಸಂಸದ ತುಕಾರಾಂ ಸೇರಿದಂತೆ ಬಿಜೆಪಿಯ ಸದಸ್ಯರಾದ ಭೋವಿ ವೀರಣ್ಣ, ಮಲ್ಲೇಸ್ವರಿ ಭರತ್ ಮತ ಸೇರಿ15 ಸದಸ್ಯರ ಬಲದೊಂದಿಗೆ ನೂತನ ಅಧ್ಯಕ್ಷರಾಗಿ ವಿ.ಮರಿರಾಮಪ್ಪ ಪುರಸಭೆ ಗದ್ದುಗೇರಿದರು.
ಜೆಡಿಎಸ್ ಶಾಸಕ ಕೆ.ನೇಮಿರಾಜನಾಯ್ಕ ಬಿಜೆಪಿ ಪಕ್ಷದ ಸದಸ್ಯರನ್ನು ಬೆಂಬಲಿಸ ಮತಯಾಚಿಸಿದರು. ಕಾಂಗ್ರೆಸ್ ಸಂಸದ ಈ.ತುಕಾರಾಂ ಕಾಂಗ್ರೆಸ್ ಸದಸ್ಯರಿಗೆ ಬೆಂಬಲಿಸಿ ಮತ ನೀಡಿದರು.
ಮಾಜಿ ಶಾಸಕ ಭೀಮಾನಾಯ್ಕ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ನೂರಾರು ಕಾರ್ಯಕರ್ತರು ಪುರಸಭೆಗೆ ಕಚೇರಿ ಮುಂದೆ ಸಂಭ್ರಮಿಸಿದರು.
ಹಿಂದಿನ ಭಾರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಹಿನ್ನಲೆಯಲ್ಲಿ ಈ ಬಾರಿ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಿತ್ತು.
ಡಿವೈಎಸ್ಪಿ ನೇತೃತ್ವದಲ್ಲಿ
ಸಿಪಿಐ 5, ಪಿಎಸ್ಐ 12, 1 ಕೆಎಸ್ಆರ್ ಪಿ ತುಕಡಿ, 1 ಡಿಆರ್ ತುಕಡಿ ಸೇರಿದಂತೆ ಒಟ್ಟು 180 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.