ನಿತ್ಯ ಕಗ್ಗದ ಬೆಳಕು.
ಒಳಿತನ್ನು ಮಾಡುವುದು ಸುಲಭ ಕೆಲಸವೇ?
ಬಳಲಿ ನೆಲದಲಿ ಮಲಗಿ ಮೈ ಮರೆತು ನಿದ್ರಿಪನ ಕುಲುಕಿ ಹಾಸಿಗೆಯನರಸೆನುವುದು ಪ್ರಕೃತಿಯೆ?|
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು ಸುಲಭವಲ್ಲೊಳಿತೆಸಗಿ – ಮಂಕುತಿಮ್ಮ ||
ಕೆಲಸ ಮಾಡಿ ಬಳಲಿ ನೆಲದಲ್ಲಿ ಮಲಗಿ ಮರೆತು ನಿದ್ರೆ ಮಾಡುವವನನ್ನು ಎಬ್ಬಿಸಿ, ಹಾಸಿಗೆಯನ್ನು ಹುಡುಕಿ ಅದರ ಮೇಲೆ ಮಲಗಿಕೊ ಎಂದು ಸಲಹೆ ಕೊಡುವುದು ಉಪಕಾರವೇ? ಒಳ್ಳೆಯದನ್ನು ಮಾಡುತ್ತೇನೆಂದು ನೆಮ್ಮದಿಯನ್ನು ನುಂಗಿಹಾಕಬೇಡ. ಒಳ್ಳೆಯದು ಮಾಡುವುದು ಅಷ್ಟು ಸುಲಭವಲ್ಲ.
ಒಬ್ಬ ಶ್ರಮಪಟ್ಟು ಕೆಲಸ ಮಾಡಿ ಬಳಲಿ ನೆಲದ ಮೇಲೆ ಮಲಗಿ ಮೈ ಮರೆತು ನಿದ್ರೆ ಮಾಡುತ್ತಿರುತ್ತಾನೆ. ಅವನ ನಿದ್ರೆ ಗಾಢವಾದ ನಿದ್ರೆ. ನೆಲದ ಮೇಲೆ ಮಲಗಿದರೂ ಹಾಸಿಗೆ ಮೇಲೆ ಮಲಗಿಕೊಂಡು ನಿದ್ರೆ ಮಾಡುವುದಕ್ಕಿಂತ ನೆಮ್ಮದಿಯಿಂದ ಅವನು ನಿದ್ರೆ ಮಾಡುತ್ತಿರುತ್ತಾನೆ. ಅವನ ಮೇಲೆ ಕರುಣೆಯಿಂದ ಅವನು ನಿದ್ರೆಗೆ ಭಂಗ ತಂದು ಹಾಸಿಗೆ ಮೇಲೆ ಮಲಗು ಎಂದು ಸಲಹೆ ಕೊಡುವುದು ಉಪಕಾರವೆ? ಒಳ್ಳೆಯದನ್ನು ಮಾಡುತ್ತೇನೆ ಎಂದು ಭಾವಿಸಿ ಇರುವ ನೆಮ್ಮದಿಯನ್ನು ಹಾಳು ಮಾಡಬೇಡ. ಒಳ್ಳೆಯದನ್ನು ಮಾಡುವುದಕ್ಕೂ ವಿವೇಕ ಬಳಸಬೇಕಾಗುತ್ತದೆ. ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ.