ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೂವಿನಹಡಗಲಿ.
ಮಾಹಿತಿ ಹಕ್ಕು ಕಾಯ್ದೆಯ ಹೆಸರಿನಲ್ಲಿ ತಾಲೂಕು ವೈದ್ಯಾಧಿಕಾರಿಗಳಿಗೆ ಕಿರುಕುಳ, ಪಿಎಚ್ಸಿ ವೈದ್ಯರ ಬಳಿ ಹಣದ ಬೇಡಿಕೆ ನೀಡಿದ ಆರೋಪದ ಹಿನ್ನಲೆಯಲ್ಲಿ ಆರ್ ಟಿಐ ಕಾರ್ಯಕರ್ತನೋರ್ವನ ವಿರುದ್ಧ ಬ್ಲಾಕ್ ಮೇಲ್ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಮತ್ತು ಮಾನಸಿಕ ಕಿರುಕುಳ, ಹಣ ಬೇಡಿಕೆ ಆರೋಪದ ಮೇಲೆ ಹೂವಿನಹಡಗಲಿ ವೈದ್ಯರ ತಂಡ ಡಿಎಚ್ಓ ಶಂಕರನಾಯ್ಕರಿಗೆ ದೂರು ಸಲ್ಲಿಸಿ ಬಳಿಕ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಆರ್ ಟಿಐ ಕಾರ್ಯಕರ್ತ ಮೋರಿಗೇರಿ ಸುರೇಶ್ ಎಂಬಾತ ಬಂಧಿತ ಆರೋಪಿ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಸುಖಾಸುಮ್ಮನೆ ಪೋನಾಯಿಸಿ ವೈದ್ಯರಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೊಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅಶೋಕ್ ರಿಗೆ ಹಣದ ಬೇಡಿಕೆಯನ್ನಿಟ್ಟದ್ದ, ಹೂವಿನಹಡಗಲಿ ತಾಲೂಕು ಮಹಿಳಾ ವೈದ್ಯಾಧಿಕಾರಿ ಡಾ.ಸ್ವಪ್ನ ಕಟ್ಟಿರನ್ನು ಗುರಿಯಾಗಿಸಿ ಏಕವಚನದಲ್ಲಿ ನಿಂದಿಸುವುದು, ಪೋನ್ ಮಾಡಿ ಬೆದರಿಕೆ ಹಾಕುವುದು ಮಾಡುತ್ತಿದ್ದ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೂ ನಿಭಾಯಿಸುತ್ತಿದ್ದೇವೆ. ಆದರೆ ವೈದ್ಯರಿಗೆ ಮಾನಸಿಕ ಕಿರುಕುಳ ನೀಡಿದರೇ ಆಸ್ಪತ್ರೆಯ ಸಿಬ್ಬಂದಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲಾದ್ಯಾಂತ ಆರ್ ಟಿಐ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ. ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗುತ್ತಿದೆ. ಕೆಲವು ವ್ಯಕ್ತಿಗಳು ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ವಿವಿಧ ಇಲಾಖೆಯ ಅಮಾಯಕ ಅಧಿಕಾರಿಗಳನ್ನು ಗುರಿಯಾಗಿಸಿ ಹಣದ ಬೇಡಿಕೆಯನ್ನಿಡುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸರ್ಕಾರಿ ಅಧಿಕಾರಿಗಳ ಅಂಬೋಣವಾಗಿದೆ.