ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.
ಮಿತ ನಿನ್ನ ಗುಣಶಕ್ತಿ, ಮಿತ ನಿನ್ನ ಕರ್ತವ್ಯ ಮಿತ ಅತಿಗಳಂತರವ ಕಾಣುವುದೆ ಕಡಿದು |
ಹಿತವೆನಿಸಿದನಿತೆಸಗು; ದೈವಕುಳಿದುದನುಬಿಡು ಕೃತಿಯಿರಲಿ ದೈವಕಂ – ಮಂಕುತಿಮ್ಮ ||
ನಿನ್ನ ಗುಣಶಕ್ತಿಗಳು ಮಿತವಾಗಿರುತ್ತವೆ. ನಿನ್ನ ಕರ್ತವ್ಯವೂ ಮಿತವಾಗಿರುತ್ತದೆ. ಈ ಮಿತಿ ಹಾಗೂ ಅತಿಗಳ ಅಂತರವನ್ನು ಕಾಣುವುದು ಬಹಳ ಕಷ್ಟ. ನಿನ್ನ ಮನಸ್ಸಿಗೆ ಹಿತವೆನಿಸಿದಷ್ಟು ನೀನು ಮಾಡು. ಉಳಿದುದನ್ನು ದೇವರಿಗೆ ಬಿಟ್ಟುಬಿಡು. ಆ ದೈವಕ್ಕೂ ಸ್ವಲ್ಪ ಕೆಲಸವಿರಲಿ.
ಈ ಪ್ರಪಂಚದಲ್ಲಿ ನಾವು ಒಂದು ಮಿತಿಯಲ್ಲಿ ಬದುಕಬೇಕಾಗುತ್ತದೆ. ನಮ್ಮ ಗುಣಗಳೂ ಮಿತ. ನಮ್ಮ ಶಕ್ತಿಯೂ ಮಿತ. ಮಿತ ಹಾಗೂ ಅತಿಗಳ ಅಂತರವನ್ನು ನಮಗೆ ಕಾಣಲಾಗದು. ಆದ್ದರಿಂದ ನಮಗೆ ಹಿತವೆನಿಸಿದಷ್ಟು ಕೆಲಸವನ್ನು ಮಾತ್ರ ನಾವು ಮಾಡಬೇಕು. ಉಳಿದುದನ್ನು ದೈವಕ್ಕೆ ಬಿಟ್ಟುಬಿಡಬೇಕು. ನಮ್ಮನ್ನು ಈ ಜಗತ್ತಿಗೆ ತಂದ ಆ ದೈವಕ್ಕೆ ಕೆಲಸ ಬೇಡವೇ? ಒಂದು ಮಿತಿಯಲ್ಲಿ ನಮ್ಮ ಶಕ್ತಿಗನುಸಾರವಾಗಿ ಕೆಲಸ ಮಾಡುತ್ತಾ ಸಾಗಬೇಕು. ಈ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ್ದಿಲ್ಲ.