ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.
ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ಇಬ್ಬರಾಗುವೆನೆಂದನಂತೆ ಪರಬೊಮ್ಮ?
ಹೆಬ್ಬದುಕಿನನೊಂಟಿತನದೊಳದೇನು ಬದುಕುವೆಯೋ? ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ ||
ಒಬ್ಬನೇ ಮನೆಯಲ್ಲಿ ಊಟ ಮಾಡುತ್ತಿದ್ದರೆ ಅದರಲ್ಲಿ ರುಚಿಯೂ ಇಲ್ಲ ಸುಖವೂ ಇಲ್ಲ. ಭಗವಂತನು ಇಬ್ಬರಾಗುವುದನ್ನು ಬಯಸಿದನಂತೆ. ಶ್ರೀಮಂತ ಬದುಕಿನ ಒಂಟಿತನದಲ್ಲಿ ಅದೇನೋ ಬದುಕುವಿ? ವಿಶ್ವವನ್ನು ತಬ್ಬಿಕೊ.
“ಉದಾರಚರಿತಾನಾಂ ತು ವಸುಧೈವ ಕುಟುಂಬಕಂ” ನಮ್ಮ ಪುರಾತನ ಋಷಿಗಳ ಉದ್ಗಾರವಿದು. ಹೃದಯವನ್ನು ವಿಶ್ವದೆದರು ತೆರೆದಿಟ್ಟಾಗ ಸಮಗ್ರ ಪ್ರಪಂಚವೇ ಕುಟುಂಬದಂತಾಗುತ್ತದೆ.
ಇವನಾರವ? ಇವನಾರವ ? ಎನ್ನದೆ ಇವ ನಮ್ಮವ, ಇವ ನಮ್ಮವ ಎಂದು ಎಲ್ಲರನ್ನೂ ಸೇರಿಸಿಕೊಳ್ಳುತ್ತಾ ಹೋದರೆ ನಾವು ವಿಶ್ವ ಕುಟುಂಬಿಗಳಾಗಿಬಿಡುತ್ತೇವೆ. ಇದನ್ನೇ ಗುಂಡಪ್ಪನವರು ಒಂದು ಸುಂದರ ನಿದರ್ಶನದೊಂದಿಗೆ ವಿವೇಚಿಸಿದ್ದಾರೆ. ಮನೆಯಲ್ಲಿ ಒಬ್ಬನೇ ಇದ್ದು ಊಟ ಮಾಡುತ್ತಿದ್ದರೆ ಈ ಊಟದಲ್ಲಿ ರುಚಿಯು ಸಿಗದು. ಸುಖದ ಅನುಭವ ಆಗದು. ಇದು ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಸೃಷ್ಟಿಕರ್ತ ತಾನು ಒಬ್ಬನೇ ಇದ್ದರೆ ಸುಖದ ಅನುಭವವಾಗದೆಂದು ತಿಳಿದು ಸೃಷ್ಟಿಕಾರ್ಯವನ್ನು ಮಾಡಲು ಶುರುಮಾಡಿದನಂತೆ. ಒಂಟಿತನದಲ್ಲಿ ಅದೆಷ್ಟೇ ಶ್ರೀಮಂತ ಬದುಕು ನಿನ್ನದಾದರೂ ಅದು ಬದುಕೆ ಅಲ್ಲ. ಆದ್ದರಿಂದ ವಿಶ್ವವನ್ನು ಹೋಗಿ ತಬ್ಬಿಕೋ, ಆಗಲೇ ನಿನ್ನ ಬದುಕಿಗೆ ಒಂದು ಅರ್ಥ ಬರುತ್ತದೆ.