ಪಂಚಮಸಾಲಿ 2ಎ ಮೀಸಲಾತಿ ಸಿಗೋವರೆಗೂ ನಿರಂತರ ಹೋರಾಟ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಂಚಮಸಾಲಿ ಸಮುದಾಯದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ 2ಎ ಮೀಸಲಾತಿ ಘೋಷಣೆಯಾಗುವವರೆಗೂ ಹೋರಾಟ ನಿರಂತರ ಎಂದು ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಏರ್ಪಡಿಸಿದ್ದ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಕೀಲರ ಸಮಾವೇಶದ ನಿಮಿತ್ತ ವಿಜಯನಗರ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜಕಾರಣಿಗಳು ಪಂಚಮಸಾಲಿ ಸಮುದಾಯವನ್ನು ಬಳಸಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಮೀಸಲಾತಿಗಾಗಿ ಅನೇಕ ಹೋರಾಟಗಳನ್ನು ನಿರಂತರವಾಗಿ ಮಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸರ್ಕಾರ ಮೀಸಲಾತಿಗೆ ಸ್ಪಂದಿಸುತ್ತಿಲ್ಲ. ಇದೇ ಸೆಪ್ಟೆಂಬರ್ 22ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ವಕೀಲರ ಸಮಾವೇಶದ ಮೂಲಕ 2ಎ ಮೀಸಲಾತಿಗೆ ಹಕ್ಕೊತ್ತಾಯ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ರಾಜ್ಯದ ಎಲ್ಲಾ ಪಂಚಮಸಾಲಿ ವಕೀಲರು ಸೆ.22 ರಂದು ವಕೀಲರ ಸಮವಸ್ತ್ರ ಸಹಿತವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಪಾದಯಾತ್ರೆಯ ಮೂಲಕ ಹಲವಾರು ಹೋರಾಟ ಮತ್ತು ಸಂಘಟನೆಯ ಮೂಲಕ ಮನವಿ ಸಲ್ಲಿಸಲಿದ್ದಾಯಿತು. ಇದೀಗ ಪಂಚಮಸಾಲಿ ಸಮಾಜದ ವಕೀಲರ ಮೂಲಕ ಹಕ್ಕನ್ನು ಕಾನೂನು ಪ್ರಕಾರ ಆಗ್ರಹಿಸುತ್ತೇವೆ. ಇದಕ್ಕೂ ಮಣಿಯದಿದ್ದರೇ, ಡಿಸೆಂಬರ್ ತಿಂಗಳಲ್ಲಿ ಇಡೀ ಸಮುದಾಯದ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ವಕೀಲರಾದ ಕೊಟ್ರೇಶ್ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬಹುತೇಕ ಹೋರಾಟಗಳನ್ನು ನಡೆಸಿದರೂ ಸರ್ಕಾರಗಳು ಸ್ಪಂದಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟದ ತೀವ್ರತೆಯಲ್ಲಿ ಪ್ರಖರಗೊಳಿಸಬೇಕಿದೆ. ಸೆ.22 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಕೀಲರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಜಯನಗರ ಜಿಲ್ಲೆಯಿಂದ ವಕೀಲರು ಭಾಗವಹಿಸಿ ಹೋರಾಟಕ್ಕೆ ಕೈಬಲಪಡಿಸಬೇಕು ಎಂದರು.
ಈ ವೇಳೆ ವಿಜಯನಗರ ಜಿಲ್ಲೆಯ ಪಂಚಮಸಾಲಿ ಸಮಾಜದ ವಕೀಲರಾದ ಹರಪನಹಳ್ಳಿಯ ಅಜ್ಜಪ್ಪ, ಮತ್ತಿಹಳ್ಳಿ ಕೊಟ್ರೇಶ್, ಜಗದೀಶ್ ಗೌಡ್ರು, ಹಡಗಲಿಯ ಗುರುಬಸವರಾಜ, ಹೊಸಪೇಟೆಯ ವಿಜಯಕುಮಾರ್, ಕೂಡ್ಲಿಗಿಯ ಕರಿಬಸವರಾಜ, ಹಗರಿಬೊಮ್ಮನಹಳ್ಳಿಯ ಭಾವಿ ಪ್ರಕಾಶ, ಮಹೇಶ್ವರ ಗೌಡ, ಅಕ್ಕಿ ಮಲ್ಲಿಕಾರ್ಜುನ, ಹುಳಗಡ್ಡಿ ಕೊಟ್ರೇಶ್, ಸೇರಿದಂತೆ ಸ್ಥಳೀಯ ಸಮಾಜದ ಮುಖಂಡರಾದ ಭದ್ರವಾಡಿ ಚಂದ್ರಶೇಖರ್, ನೇತಾಜಿ ಗೌಡ್ರು, ಎಚ್.ಎ.ಕೊಟ್ರೇಶ್ ಇದ್ದರು.