ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.
ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ?
ಓಲೆಗಳನವರವರಿಗೈದಿಸಿರೆ ಸಾಕು
ಸಾಲಗಳೊ, ಶೂಲಗಳೊ, ನೋವುಗಳೋ, ನಗವುಗಳೋ ಕಾಲೋಟವವನೂಟ – ಮಂಕುತಿಮ್ಮ ||
ಅಂಚೆಯವನಿಗೆ ಬರೆದ ಸುದ್ದಿಯ ಚಿಂತೆ ಏಕೆ? ಪತ್ರಗಳನ್ನು ಅವರವರಿಗೆ ತಲುಪಿಸಿದರೆ ಸಾಕು ಸಾಲಗಳ ಸುದ್ದಿಯು ವೇದನೆಗಳ ಸುದ್ದಿಯು ನೋವುಗಳ ಸುದ್ದಿಯೋ ಸಂತೋಷದ ಸುದ್ದಿಯೋ ಯಾವುದು ಅವನಿಗೆ ಸಂಬಂಧವಿಲ್ಲ ಅವನ ಕಾಲುಗಳ ಓಟವೇ ಅವನ ಊಟ.
ಅಂಚೆಯವನು ಓಲೆಗಳನ್ನು ಅದರ ಮೇಲಿರುವ ಗೃಹ ಸಂಕೇತಕ್ಕನುಗುಣವಾಗಿ ಅವರವರಿಗೆ ಹಂಚಿ ಬಿಡಬೇಕು. ಅದು ಅವನ ಕೆಲಸ. ಆ ಪತ್ರದ ಒಳಗಿರುವ ಸುದ್ದಿಗಳ ಚಿಂತೆ ಅವನನ್ನು ಕಾಡದು. ಅದರಲ್ಲಿ ಸಾಲದ ಸುದ್ದಿಯೋ, ನೋವಿನ ಸುದ್ದಿಯೋ, ನಲಿವಿನ ಸುದ್ದಿಯೋ, ಯಾವುದು ಇರಬಹುದು. ಅದಕ್ಕೂ ಅವನಿಗೂ ಸಂಬಂಧವಿಲ್ಲ. ಮನೆಯಿಂದ ಮನೆಗೆ ಅವನು ಓಡುತ್ತಿರಬೇಕಷ್ಟೆ. ಆ ಕೆಲಸವೇ ಅವನಿಗೆ ಊಟವನ್ನು ಒದಗಿಸುತ್ತದೆ. ಅದರಂತೆ ಈ ಭೂಮಿಯಲ್ಲಿ ನಾವೆಲ್ಲ ಅಂಚೆಯವನಂತೆ. ಬದುಕನ್ನು ಕೆದಕಿ ನೋಡುವ ಅಗತ್ಯವಿಲ್ಲ. ಬದುಕಿನ ಸಾಗರದಲ್ಲಿ ತೆಲುತ್ತಾ ಸಾಗಬೇಕು ಮುಳುಗಿದರೆ ಆಪತ್ತು. ಭಗವಂತ ನಮ್ಮನ್ನು ಭೂಮಿಗೆ ಒಂದಷ್ಟು ಕೆಲಸ ಮಾಡಲು ಕಳುಹಿಸಿದ್ದಾನೆ ಅದನ್ನು ಪ್ರಾಮಾಣಿಕವಾಗಿ ಮಾಡುತ್ತ ಸಾಗಬೇಕು. ಅದನ್ನು ಮಾಡುತ್ತ ಸಾಗಿದರೆ ನಮಗೆ ಯಾವ ಕೊರತೆಯೂ ಉಂಟಾಗದು. ನೆನಪಿರಲಿ, ನಮ್ಮದು ಅಂಚೆಯವನ ಪಾತ್ರ.